ಜಿಲ್ಲೆ

ಭಾರೀ ಮಳೆ ಹಿನ್ನೆಲೆ ಸುರತ್ಕಲ್-ನಂತೂರು ಜಂಕ್ಷನ್ ರಾ.ಹೆ.ಯಲ್ಲಿ ಸೆಪ್ಟೆಂಬರ್‌ವರೆಗೆ ವೇಗಮಿತಿ ನಿಗದಿ

ಮಂಗಳೂರು: ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸುರತ್ಕಲ್-ನಂತೂರು ಜಂಕ್ಷನ್ ನಡುವೆ ಸೆಪ್ಟೆಂಬರ್ ಅಂತ್ಯದವರೆಗೆ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 50 ಕಿ.ಮೀ.ಗೆ ನಿಗದಿಪಡಿಸಲಾಗಿದೆ.

ಈ ನಿಬರ್ಂಧವು ಸೆಪ್ಟೆಂಬರ್ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ನಿರಂತರ ಮಳೆಯಿಂದಾಗಿ ಹೆದ್ದಾರಿಯ ಹಲವಾರು ಭಾಗಗಳು ಹಾನಿಗೊಳಗಾಗಿರುವುದರಿಂದ ವಾಹನಗಳ ಅತಿ ವೇಗದ ಚಾಲನೆಗೆ ರಸ್ತೆಯು ಅಸುರಕ್ಷಿತವಾಗಿದೆ. ಹೆದ್ದಾರಿ ಬಳಕೆದಾರರ ಸುರಕ್ಷತೆಯನ್ನು ಪರಿಗಣಿಸಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ರಾಷ್ಟ್ರೀಯ ಹೆದ್ದಾರಿ (ಭೂಮಿ ಮತ್ತು ಸಂಚಾರ) ಕಾಯಿದೆ, 2002ರ ಅಡಿಯಲ್ಲಿ ಇರುವ ಅಧಿಕಾರ ಬಳಸಿಕೊಂಡು ವೇಗ ನಿಯಂತ್ರಣ ಜಾರಿಗೊಳಿಸಿದೆ.

ಸದ್ಯ ಹೆದ್ದಾರಿ ಕೆಟ್ಟುಹೋಗಿರುವುದರಿಂದ ಘನವಾಹನಗಳು, ಲಘುವಾಹನಗಳು, ದ್ವಿಚಕ್ರ, ತ್ರಿಚಕ್ರ ವಾಹನಗಳೆಲ್ಲವೂ ಪ್ರಸ್ತುತ ಹೆದ್ದಾರಿಯನ್ನೇ ಬಳಸುತ್ತಿರುವುದರಿಂದ ಕೆಲವೊಮ್ಮೆ ವಾಹನಗಳು ಹೊಂಡ ತಪ್ಪಿಸಲು ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ಅಪಘಾತಗಳ ಅಪಾಯ ಹೆಚ್ಚಾಗುತ್ತಿದೆ. ಹೀಗಾಗಿ ಸರ್ವಿಸ್ ರಸ್ತೆಗಳು ಲಭ್ಯವಿರುವ ಕಡೆಗಳಲ್ಲಿ, ವಿಶೇಷವಾಗಿ ಪಣಂಬೂರು, ಸುರತ್ಕಲ್ ಮತ್ತು ಬೈಕಂಪಾಡಿ ಪ್ರದೇಶಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಂಚರಿಸಿದರೆ ಸಂಚಾರ ಸುಗಮವಾಗಬಹುದು ಎಂದು ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ತಿಳಿಸಿದ್ದಾರೆ.