ಜಿಲ್ಲೆ

ಮಹಾ ಚುನಾವಣೆ ನಂತರ ಹುಬ್ಬಳ್ಳಿ-ಅಂಕೋಲಾ ಯೋಜನೆಗೆ ವೇಗ

ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ನಿರ್ವಣಕ್ಕೆ ಅರಣ್ಯ ಪ್ರದೇಶದಲ್ಲಿರುವ 26 ಕಿಮೀ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆದಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಈ ಯೋಜನೆ ಅನುಷ್ಠಾನಕ್ಕೆ ವೇಗ ಸಿಗಲಿದೆ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಇಲ್ಲಿನ ರೈಲ್ ಸೌಧದಲ್ಲಿ ಗುರುವಾರದಂದು ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ಸೋಮಣ್ಣ ಮಾತನಾಡಿದರು.

ಧಾರವಾಡ -ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗಕ್ಕೆ ಬೇಕಾದ ಭೂಮಿಯನ್ನು ವಶಪಡಿಸಿಕೊಳ್ಳುವ ಕಾರ್ಯ ಇದೇ ಡಿಸೆಂಬರ್​ವೊಳಗೆ ಪೂರ್ಣಗೊಳ್ಳಲಿದೆ. ಭೂಮಿ ಹಸ್ತಾಂತರಗೊಂಡ ನಂತರ ಎರಡು ವರ್ಷಗಳಲ್ಲಿ ಈ ನೂತನ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ವಣಕ್ಕೆ 927 ಕೋಟಿ ರೂ. ಮೀಸಲಿರಿಸಲಾಗಿತ್ತು. ಇದೀಗ ಈ ಯೋಜನಾ ಮೊತ್ತ 1,200 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ರೈಲ್ವೆಯ ಗುತ್ತಿಗೆ ಕಾಮಗಾರಿ, ರೈಲು ನಿಲ್ದಾಣದಲ್ಲಿ ಸ್ಟಾಲ್​ಗಳನ್ನು ಅಳವಡಿಸಲು ಹಾಗೂ ಇನ್ನಿತರ ಕಾರ್ಯಗಳಿಗೆ ಸ್ಥಳೀಯರಿಗೆ ಆದ್ಯತೆ ಕೊಡುವಂತೆ ಶಾಸಕ ಮಹೇಶ ಟೆಂಗಿನಕಾಯಿ ಇದೇ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಆಗ್ರಹಿಸಿದರು.

ಹುಬ್ಬಳ್ಳಿ ಎಪಿಎಂಸಿಯಲ್ಲಿ ಸರಕು ಸಾಗಾಟಕ್ಕೆ ಸಂಪರ್ಕ ಮಾರ್ಗ ಒದಗಿಸಬೇಕು ಎಂದು ಮನವಿ ಮಾಡಿದರು. ರೈಲ್ವೆ ಯೋಜನೆಗಳಿಗೆ ಭೂಮಿ ನೀಡಿದ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರವನ್ನು ನಿತ್ಯ ಬೆಳಗ್ಗೆ ಹುಬ್ಬಳ್ಳಿ-ಧಾರವಾಡದಿಂದ ಪ್ರಾರಂಭಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ, ಎಪಿಎಂಸಿ ಹಾಗೂ ಅದರ ಪಕ್ಕದ ಉಗ್ರಾಣದ ಜಾಗವನ್ನು ನೀಡಿದರೆ ಸರಕು ಸಾಗಾಟಕ್ಕೆ ಸಂಪರ್ಕ ಮಾರ್ಗ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ರೈಲ್ವೆ ಯೋಜನೆಗಳಿಗೆ ಭೂಮಿ ಕೊಟ್ಟ ಕುಟುಂಬದವರಿಗೆ ಉದ್ಯೋಗ ನೀಡುವ ನಿಯಮ ಈ ಮೊದಲು ಇತ್ತು. ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದರೆ ರೈಲ್ವೆ ಸಚಿವರು ಹಾಗೂ ಪ್ರಧಾನಿ ಅವರೊಂದಿಗೆ ರ್ಚಚಿಸಲಾಗುವುದು. ವಂದೇ ಭಾರತ್ ರೈಲು ಸಂಚಾರ ಹುಬ್ಬಳ್ಳಿ-ಧಾರವಾಡದಿಂದ ಪ್ರಾರಂಭಿಸುವ ಬಗ್ಗೆ ರ್ಚಚಿಸಲಾಗುವುದು ಎಂದು ತಿಳಿಸಿದರು.

ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ರೈಲ್ವೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.