ಡಿಕೆಸು ವಿರುದ್ಧ ಬಿಜೆಪಿ - ಜೆಡಿಎಸ್ ಟೀಕಾಪ್ರಹಾರ
ಗಂಗಾಧರ್ ಬೈರಾಪಟ್ಟಣ
ರಾಮನಗರ: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಗಾದೆ ಈ ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಎನಿಸಿದೆ.
ಪ್ರಭಲ ಪೈಪೋಟಿ ಏರ್ಪಟ್ಟಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಪರಸ್ಪರರ ವಿರುದ್ಧ ಎಲ್ಲಿಯೂ ಟೀಕೆಗೆ ಇಳಿಯದೇ ಇರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು.
ಈ ಹಿಂದಿನ ಎಲ್ಲಾ ಚುಣಾವಣೆಗಳಲ್ಲಿ ಅಭ್ಯರ್ಥಿಗಳು ಪರಸ್ಪರ ವಿರುದ್ಧ ಟೀಕೆ ಮಾಡಿಕೊಂಡು ಮತದಾರರ ಬಾಯಿಗೆ ಆಹಾರವಾಗುತ್ತಿದ್ದರು. ಆದರೆ ಈವರೆಗೂ ಇಂತಹ ಮಾತುಗಳು ಇಬ್ಬರೂ ಅಭ್ಯರ್ಥಿಗಳಿಂದ ಹೊರ ಬಿದ್ದಿಲ್ಲ.
ಡಾ. ಸಿ.ಎನ್.ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಗುಸು ಗುಸುಗಳ ಸಂದರ್ಭದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ಡಾಕ್ಟರ್ ಹರಕೆ ಕುರಿ, ಬಲಿಪಶು ಎಂದೆಲ್ಲಾ ಹೇಳಿದ್ದು ಬಿಟ್ಟರೆ. ಉಳಿದಂತೆ ಗುರುವಾರ ನಡೆದ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾಕ್ಟರ್ ವೈಟ್ ಕಾಲರ್, ಇವರು ಬೇಕಾ ಎನ್ನುವ ಮಾತುಗಳನ್ನು ಆಡಿದ್ದರು. ಆದರೆ ಎಲ್ಲಿಯೂ ಅವರ ಬಗ್ಗೆ ಟೀಕೆ ಮಾಡುವ ಯತ್ನಕ್ಕೆ ಮುಂದಾಗಲೇ ಇಲ್ಲ.
ಮತ್ತೊಂದೆಡೆ ಡಿ.ಕೆ. ಶಿ ಸಹೋದರರು ಸಹ ಡಾಕ್ಟರ್ ಬಗ್ಗೆ ಎಚ್ಚರಿಕೆ ನಡೆಯಿಟ್ಟಿದ್ದಾರೆ. ಎಲ್ಲಿಯೂ ಡಾ.ಸಿ.ಎನ್.ಮಂಜುನಾಥ್ ಅವರನ್ನು ಟೀಕಿಸುವ ಸಾಹಸಕ್ಕೆ ಇಳಿಯಲಿಲ್ಲ. ಇಷ್ಟೇ ಅಲ್ಲದೆ, ತಮ್ಮ ಶಾಸಕರು ಹಾಗೂ ಪಕ್ಷದ ಮುಖಂಡರಿಗೂ ಸಹ ನಿದೇರ್ಶನ ನೀಡಿದ್ದು, ಯಾವುದೇ ಕಾರಣಕ್ಕೂ ಡಾಕ್ಟರ್ ಅವರನ್ನು ಟಾರ್ಗೆಟ್ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದೆಡೆ ಬಿಜೆಪಿ - ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದ್ದರೆ. ಅತ್ತ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಸಭ್ಯತೆ ಗೆರೆಯನ್ನು ದಾಟುತ್ತಿಲ್ಲ. ತಮ್ಮದೇ ವೇದಿಕೆಯಲ್ಲಿ ಯಾವೆಲ್ಲಾ ನಾಯಕರೂ ತಮ್ಮ ಪ್ರತಿ ಸ್ಪರ್ಧಿ ವಿರುದ್ಧ ಎಷ್ಟೇ ಆರೋಪಗಳನ್ನು ಮಾಡಿ, ಟೀಕಾ ಪ್ರಹಾರಗಳನ್ನು ನಡೆಸಿದರೂ ಈವರೆವಿಗೂ ಎಲ್ಲಿಯೂ ತಮ್ಮ ಪ್ರತಿ ಸ್ಪರ್ಧಿಯನ್ನಾಗಲಿ, ಇಲ್ಲವೇ ಎದುರಾಳಿ ಪಕ್ಷದ ನಾಯಕರನ್ನಾಗಲಿ ಟೀಕಿಸುತ್ತಿಲ್ಲ. ಮಾಧ್ಯಮಗಳೂ ಪ್ರಶ್ನೆಗಳ ಮೂಲಕ ಕೆಣಕಿದರೂ ಎಲ್ಲದಕ್ಕೂ ಸಭ್ಯತೆ ಎಲ್ಲಿಯೇ ಉತ್ತರ ಕೊಡುವ ಮೂಲಕ ರಾಜಕೀಯ ನೈಪುಣ್ಯತೆಯನ್ನು ಮರೆಯುತ್ತಿದ್ದಾರೆ.
ಕಾಂಗ್ರೆಸ್ ನಾಯಕರು ಡಾ.ಮಂಜುನಾಥ್ ಅವರನ್ನಾಗಲಿ, ಮಂಜುನಾಥ್ ಅವರು ತಮ್ಮ ಪ್ರತಿ ಸ್ಪರ್ಧಿ ಡಿ.ಕೆ.ಸುರೇಶ್ ಅವರನ್ನಾಗಲಿ ಪರಸ್ಪರ ಟೀಕೆ ಮಾಡದೇ ಕಳೆದ ಬಾರಿ ಮಂಡ್ಯ ಲೋಕಸಭೆ ಚುಣಾವಣೆ ಕಲಿಸಿದ ಪಾಠ ಕಾರಣ ಎನ್ನಲಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಕಾರಣಗಳಲ್ಲಿ ನಾಯಕರು ಆಡಿದ ಮಾತುಗಳೂ ಒಂದು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವೈಧ್ಯ ವೃತ್ತಿ ಮೂಲಕವೇ ಹೆಸರು ಮಾಡಿರುವ ಡಾ.ಸಿ.ಎನ್.ಮಂಜುನಾಥ್ ಅವರ ವಿರುದ್ಧ ಯಾರೂ ಟೀಕೆ ಮಾಡುತ್ತಿಲ್ಲ. ಅತ್ತ ಮಂಜುನಾಥ್ ಅವರೂ ಸಹ ಟೀಕೆ ಮಾಡುವುದರಿಂದ ದೂರವೇ ಉಳಿದಿದ್ದಾರೆ.