ವಿಜಯವಾಣಿ ಸುದ್ದಿಜಾಲ ಧಾರವಾಡ
ವ್ಯಕ್ತಿತ್ವ ಕಿರಿದಾಗುತ್ತಿದೆ ಬರವಣಿಗೆ ಹಿರಿದಾಗುತ್ತಿದೆ. ನಮ್ಮ ಚರಿತ್ರೆ ಮರೆತು ಬರವಣಿಗೆ ಮಾಡುತ್ತಿದ್ದೇವೆ. ವ್ಯಕ್ತಿ ಪರಂಪರೆ ಮತ್ತು ಸಾಹಿತ್ಯ ಕುರಿತು ನಮ್ಮ ಹೆಜ್ಜೆಗಳನ್ನು ಗುರುತಿಸಿಕೊಳ್ಳಬೇಕಾದರೆ ಹಿಂದಿನ ಹೆಜ್ಜೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಪ್ರೊ. ಗುಂಡಣ್ಣ ಕಲಬುರ್ಗಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎಂ.ಆರ್. ಕುಂಬಾರ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಓದು ಒಂದು ಮಾನಸ ಪ್ರಕ್ರಿಯೆ ಕುರಿತು ಮಾತನಾಡಿದರು.
ಜವಾಬ್ದಾರಿಯಿಂದ ಮಾತಾಡಿದಾಗ ಮಾತ್ರ ಮಾತಿಗೆ ಬೆಲೆ ಸಿಗುತ್ತದೆ ಮತ್ತು ಅರ್ಥ ಬರುತ್ತದೆ. ಯಾವುದೇ ಸಾಹಿತಿ ಬೇಂದ್ರೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅಷ್ಟೊಂದು ಪ್ರಭಾವ ಅವರ ಸಾಹಿತ್ಯದ್ದಾಗಿದೆ. ಓದಿನಲ್ಲಿ ತರಂಗಗಳಿರುತ್ತವೆ. ಮಾನಸ ಪ್ರಕ್ರಿಯೆಗೆ ಅವು ಪ್ರೇರಣೆ ನೀಡುತ್ತವೆ. ಮಾನಸ ಪ್ರಕ್ರಿಯೆ ಕಾಣಲು ಸಾಧ್ಯವಿಲ್ಲ. ಕವಿತೆ ಕುರಿತು ಭಾವಾರ್ಥವನ್ನು ಬರಹದಲ್ಲಿ ನೀಡಬಾರದು. ಮಾತು ಮತ್ತು ಮೌನ ಸೃಜನಶೀಲತೆಯಲ್ಲಿ ಕವಿ ತನ್ನ ದುಃಖ ಮರೆಯುತ್ತಾನೆ ಎನ್ನುವುದನ್ನು ಬೇಂದ್ರೆಯವರ ಕಾವ್ಯದಲ್ಲಿ ಕಾಣಬಹುದು ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ಎಲ್. ಸಂಗಮ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಕೆ.ಜಿ. ದೇವರಮನಿ, ಎಸ್.ಬಿ. ಪಾಟೀಲ, ಶ್ರೀನಿವಾಸ ವಾಡಪ್ಪಿ, ಸವಣೂರ, ಹಿರೇಮಠ, ಬಿ.ಕೆ. ಹೊಂಗಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.