ಸಾಹಿತ್ಯ ಗ್ರಾಮದ ಮುಂದುವರಿದ ಕಾಮಗಾರಿಗಳ ನೀಲಿನಕ್ಷೆಯನ್ನು ಮಧು ಬಂಗಾರಪ್ಪ ಅನಾವರಣಗೊಳಿಸಿದರು. ಡಾ.ಪುರುಷೋತ್ತಮ ಬಿಳಿಮಲೆ, ನಾಗತಿಹಳ್ಳಿ ಚಂದ್ರಶೇಖರ್, ಡಾ.ಜೆ.ಕೆ.ರಮೇಶ್, ಡಾ.ಎಸ್.ಪಿ.ಪದ್ಮಪ್ರಸಾದ್ ಮುಂತಾದವರಿದ್ದರು.  
ಜಿಲ್ಲೆ

ಮಾತಾಡುವಾಗ ವ್ಯತ್ಯಯ, ಹೃದಯ ಅಚ್ಚಗನ್ನಡ

ಅರವಿಂದ ಅಕ್ಲಾಪುರ

ಶಿವಮೊಗ್ಗ: ನಾನು ಕಾನ್ವೆಂಟ್‌ನಲ್ಲಿ ಓದಿದ್ದು. ಹೀಗಾಗಿ ಸಾಹಿತ್ಯದ ಬಗ್ಗೆ ಮಾತನಾಡುವುದು, ಕನ್ನಡ ಓದುವುದು ಕಷ್ಟ. ಹಾಗೆಂದು ಕನ್ನಡವೇ ಬರಲ್ಲ ಅಂತೇನಿಲ್ಲ...ಹೀಗೆ ತಮ್ಮ ಕನ್ನಡ ಜ್ಞಾನದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಹೇಳಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

ಗುರುವಾರ ಆರಂಭವಾದ ಎರಡು ದಿನಗಳ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಮೊದಲು ತಮ್ಮ ತಂದೆ ಬಂಗಾರಪ್ಪ ಅವರು ನಾಡು, ನೆಲ, ಜನಕ್ಕೆ ನೀಡಿದ ಕೊಡುಗೆಯನ್ನು ಮೆಲುಕು ಹಾಕಿದರು. ಬಳಿಕ ತಮ್ಮ ಭಾಷಾ ಜ್ಞಾನದ ಬಗ್ಗೆ ಮಾತನಾಡಿದರು.

ಮಾಧ್ಯಮಗಳಲ್ಲಿ ಅನೇಕ ಬಾರಿ ನನ್ನ ಕನ್ನಡದ ಬಗ್ಗೆ ಚರ್ಚೆಯಾಗುತ್ತಿದೆ. ನಾನೇನೂ ಮಕ್ಕಳಿಗೆ ಕನ್ನಡ ಪಾಠ ಹೇಳಬೇಕಿಲ್ಲ. ಶಿಕ್ಷಣ ಇಲಾಖೆಯ ಕೆಲಸ ಮಾಡಿದರೆ ಸಾಕು. ಅದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ. ಮಾತಾಡುವಾಗ ಕೊಂಚ ವ್ಯತ್ಯಾಸ ಆಗಬಹುದು. ಆದರೆ ಹೃದಯ ಮಾತ್ರ ಅಚ್ಚಗನ್ನಡ ಎಂದು ತಮ್ಮ ಕನ್ನಡ ಪ್ರೀತಿಯನ್ನು ಹೇಳಿಕೊಂಡರು.

ಕರ್ನಾಟಕದಲ್ಲಿ ಓದುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು. ಇದರಲ್ಲಿ ಯಾವುದೇ ರಾಜಿಯಿಲ್ಲ. ಆದರೆ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೂ ನಾವು ಪರಿಗಣಿಸಬೇಕು. ಕಲಿಕಾ ಮಾಧ್ಯಮದ ಹಕ್ಕು ಪಾಲಕರು ಹಾಗೂ ವಿದ್ಯಾರ್ಥಿಗಳದ್ದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದರು.