ಹುಬ್ಬಳ್ಳಿ: ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಊಟದ ವ್ಯವಸ್ಥೆ ಇರಲಿದೆ. ಇದಕ್ಕಾಗಿ ಬೃಹತ್ ಊಟದ ಮನೆ ನಿರ್ವಿುಸಲಾಗಿದೆ. ಅತ್ಯಾಧುನಿಕ ಊಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ವಿಐಪಿ, ಭಕ್ತರು, ಅರ್ಚಕರು ಊಟ ಮಾಡಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ.
ಋತ್ವಿಕರು ಉಳಿದುಕೊಳ್ಳಲು 6 ಕೊಠಡಿಗಳು ಇವೆ. ಇದಕ್ಕೆ ಅರ್ಚಕರ ವಸತಿ ಗೃಹವೆಂದು ಹೆಸರಿಡಲಾಗಿದೆ. 4 ಕೊಠಡಿಗಳಿದ್ದು, ಎರಡು ಒನ್ಬಿಎಚ್ಕೆ ರೂಮ್ಳಿವೆ. ಗೆಸ್ಟ್ ಹೌಸ್ ಜಿ ಪ್ಲಸ್ 2 ಇದ್ದು, ಕೆಳಮಹಡಿಯಲ್ಲಿ 3 ಕೊಠಡಿಗಳಿವೆ. ಒಂದು ಊಟದ ಮನೆ ಹಾಗೂ ಸಭಾಂಗಣ ಇದೆ. ಮೊದಲ ಮಹಡಿಯಲ್ಲಿ 7 ರೂಮ್ಳಿದ್ದು, ಎರಡನೇ ಮಹಡಿಯಲ್ಲಿ ಪ್ರವಚನ ಸಭಾಗೃಹ ನಿರ್ವಿುಸಲಾಗಿದೆ. ಇನ್ನೊಂದು ಸಮುಚ್ಛಯದ ಕೆಳಮಹಡಿಯಲ್ಲಿ ಪ್ರಸಾದ ನಿಲಯವಿದೆ. 20 ವಿಐಪಿಗಳು ಊಟ ಮಾಡಬಹುದು. ಹಾಲ್ನಲ್ಲಿ 60 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ 200 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಕನ್ವೆನ್ಷನ್ ಸಭಾಗೃಹವಿದೆ. ಪಕ್ಕದಲ್ಲಿಯೇ ಮಹಿಳೆಯರು, ಪುರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ವಿುಸಲಾಗಿದೆ. ಭಕ್ತರು ಹೋಗಿ ಬರಲು 2 ಲಿಫ್ಟ್ ಹಾಗೂ ಊಟದ ಸಾಮಗ್ರಿ, ಪಾತ್ರೆ ಕಳುಹಿಸಲು ಡಂಬ್ ಎಲಿವೇಟರ್ ಇದೆ.
ಮಾಡರ್ನ್ ಕಿಚನ್: ಆನಂದೇಶ್ವರ, ಜ್ಞಾನಾಂಬಿಕೆ, ವಿಜಯ ಗಣಪತಿ, ಶನೈಶ್ಚರ ಹೀಗೆ ವಿವಿಧ ದೇಗುಲಗಳು ಒಂದೇ ಆವರಣದಲ್ಲಿ ಇರುವು ದರಿಂದ ನಿರಂತರವಾಗಿ ಒಂದಿಲ್ಲೊಂದು ಧಾರ್ವಿುಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಅನ್ನಸಂತರ್ಪಣೆಯೂ ನಡೆಯುತ್ತವೆ. ಎಷ್ಟೇ ಜನ ಬಂದರೂ ಏಕಕಾಲಕ್ಕೆ ಶೀಘ್ರವಾಗಿ ಅಡುಗೆ ಮಾಡುವ ಸಲುವಾಗಿ ಮಾಡರ್ನ್ ಕಿಚನ್ ಇಲ್ಲಿ ಸಿದ್ಧ ಪಡಿಸಲಾಗಿದೆ. ಅಡುಗೆ ಮಾಡಲು ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲಾಗಿದೆ. ಪ್ರಸಾದಕ್ಕಾಗಿ ಎರಡು ಮಹಡಿಯ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಲಿಫ್ಟ್ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಎಲ್ಲವನ್ನೂ ಅತ್ಯಾಧುನಿಕ ಸೌಲಭ್ಯಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಏಕಶಿಲೆ ಧ್ವಜಸ್ತಂಭ: ದೇವಸ್ಥಾನಕ್ಕೆ ಮುಕುಟ ಪ್ರಾಯ ಧ್ವಜಸ್ತಂಭ. ಇದು 32 ಅಡಿ ಎತ್ತರವಿದ್ದು, ಏಕಶಿಲೆಯಲ್ಲಿ ನಿರ್ವಿುಸಲಾಗಿದೆ. ಬೇರೆಡೆ ತುಂಡಾದ ಕಲ್ಲುಗಳನ್ನು ಒಂದರ ಮೇಲೊಂದು ಇಟ್ಟಿರುವುದನ್ನು ನೋಡಿದ್ದೇವೆ. ಇದು ಏಕಶಿಲೆ. ಹಾಗಾಗಿ, ಈ ಧ್ವಜಸ್ತಂಭ ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ರಾಜಗೋಪುರ 60 ಅಡಿ ಎತ್ತರವಿದೆ. 5 ಅಂತಸ್ತುಗಳನ್ನು ಹೊಂದಿದ್ದು, ಪಂಚವರ್ಣಗಳು ಕಣ್ಣಿಗೆ ಮುದ ನೀಡಿ ಭಕ್ತಿ ಭಾವ ತುಂಬುತ್ತವೆ.
ಸೇವಾ ಕೈಂಕರ್ಯ ಕೊಠಡಿಗಳು: ದೇವಸ್ಥಾನ ಪ್ರಾಂಗಣದ ರಾಜಗೋಪುರ ಬಳಿ ಸೇವಾ ಕಚೇರಿ, ನೈವೇದ್ಯ ತಯಾರಿಕೆಗೆ ಕಟ್ಟಡ ನಿರ್ವಿುಸಲಾಗಿದೆ. ಇಲ್ಲಿಯೇ ನೈವೇದ್ಯ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತಿದೆ. ಪ್ರಶಸ್ತ ಸ್ಥಳದಲ್ಲಿ ಇದನ್ನು ನಿರ್ವಿುಸಿದ್ದು, ಶುಚಿಯಾಗಿ ಮಡಿಯಿಂದ ದೇವರಿಗೆ ನೈವೇದ್ಯ ಅರ್ಪಿಸಲು ಅನುಕೂಲವಾಗಿದೆ. ಸೇವಾ ಕಚೇರಿಯಿಂದ ದೇವರಿಗೆ ಅಗತ್ಯ ಸೇವಾ ಕೈಂಕರ್ಯ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಹಾದ್ವಾರದ ಬಳಿ ಸೆಕ್ಯೂರಿಟಿ ಕೊಠಡಿಗಳಿವೆ. ಪೂಜಾ ಕೊಠಡಿ, ಬಜಾರ್ ಸ್ಟ್ರೀಟ್, ಪಾದರಕ್ಷೆ ಇಡುವ ಕೊಠಡಿಗಳಿವೆ.