ರೋಣ: ಪಟ್ಟಣದ ಭೀಮಸೇನ ಜೋಶಿ ತಾಲೂಕಾಸ್ಪತ್ರೆ ತಜ್ಞ ವೈದ್ಯ ಡಾ.ಎಚ್.ಎಲ್. ಗಿರಡ್ಡಿ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲೂಕಾಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯರಾದ ಸಂಗಪ್ಪ ಜಿಡ್ಡಿಬಾಗಿಲ ಮಾತನಾಡಿ, ಹಲವು ದಶಕಗಳಿಂದ ಡಾ. ಗಿರಡ್ಡಿ ಅವರು ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ತಜ್ಞ ವೈದ್ಯರ ಕೊರತೆ ಇದ್ದರೂ ಅವರೇ ಎಲ್ಲವನ್ನೂ ನಿಭಾಯಿಸಿಕೊಂಡು ಬಡ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅನೇಕ ಶಸ್ತ್ರ ಚಿಕಿತ್ಸೆಗಳ ಮೂಲಕ ಬಡ ಜನರ ಆಶಾಕಿರಣವಾಗಿದ್ದಾರೆ. ಇಂತಹ ಉತ್ತಮ ವೈದ್ಯರನ್ನು ವರ್ಗಾವಣೆಗೊಳಿಸುತ್ತಿರುವುದು ಖಂಡನೀಯ. ಈ ಕೂಡಲೆ ಜಿಲ್ಲಾ ವೈದ್ಯಾಧಿಕಾರಿಗಳು ಗಿರಡ್ಡಿಯವರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಅರ್ಜುನ ಕೊಪ್ಪಳ ಮಾತನಾಡಿ, ಡಾ.ಎಚ್.ಎಲ್. ಗಿರಡ್ಡಿ ಅವರ ಅನ್ಯನ್ಯ ಸೇವೆ ತಾಲೂಕಿನ ಬಡ ರೋಗಿಗಳಿಗೆ ಅವಶ್ಯಕವಾಗಿದ್ದು, ಅವರ ವರ್ಗಾವಣೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಸಂಜಯ ರೆಡ್ಡರ, ನಾಗರಾಜ ಪಲ್ಲೇದ, ನಾಗಪ್ಪ ದೇಶಣ್ಣವರ, ಎ.ವೈ. ನವಲಗುಂದ, ವೈ.ವಿ. ಕಿರೇಸೂರ, ಹಣಮಂತ ಚಲವಾದಿ, ರವಿ ದೇಶಣ್ಣವರ, ಅಸ್ಲಾಂ ಕೊಪ್ಪಳ, ಅಬ್ದುಲ್ ಹೂಸೂರ, ಮಹದೇವಪ್ಪ ಕಳಸಣ್ಣವರ, ಎಂ.ಕೆ. ಎಲಿಗಾರ, ಸಿ.ಎಚ್. ಹಲಗಿ, ಎಂ.ಎಚ್.ನಂದಿ, ಎಸ್.ಪಿ. ಚಲವಾದಿ, ಅಜಯ್ ಕೆ.ಎಸ್., ಎನ್.ಎಫ್. ದೊಡ್ಮನಿ, ಅಶ್ಪಾಕ್ ಮುಲ್ಲಾ, ಬಿ.ಎಂ. ಕಟ್ಟಿಮನಿ, ಇತರರಿದ್ದರು.