ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರಪಂಚಮಿ ಪ್ರಯುಕ್ತ ಮಂಗಳವಾರ ನಾಗಕ್ಷೇತ್ರ, ದೇವಾಲಯ ಹಾಗೂ ಕುಟುಂಬಗಳ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಲಕ್ಷಾಂತರ ಭಕ್ತರು ಮುಂಜಾನೆ ಕುಟುಂಬದ ಮೂಲನಾಗನ ಸ್ಥಾನಕ್ಕೆ, ಸಾರ್ವಜನಿಕ ನಾಗ ಬ್ರಹ್ಮಸ್ಥಾನಕ್ಕೆ ತೆರಳಿ ಶ್ರದ್ಧಾಭಕ್ತಿಯಿಂದ ತನು ಅರ್ಪಿಸಿ, ಪ್ರಾರ್ಥಿಸಿದರು.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಿತು. ಮುಂಜಾನೆ 4ರಿಂದ ರಾತ್ರಿ 10ರವರೆಗೆ ದೇವಸ್ಥಾನ ತೆರೆದಿದ್ದು, 50 ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆದರು. ಪ್ರಾತಃಕಾಲ 3ರಿಂದಲೇ ಭಕ್ತರು ಸರತಿ ಸಾಲಲ್ಲಿ ನಿಂತು ನಾಗದೇವರಿಗೆ ಹಾಲಿನ ಅಭಿಷೇಕ ನೆರವೇರಿಸಿದರು. 50 ಸಾವಿರದಷ್ಟು ಸೀಯಾಳ ಅಭಿಷೇಕ ನಡೆದಿವೆ. ಭಕ್ತರಿಂದ 100 ಲೀಟರ್ ಹಾಲಿನ ಅಭಿಷೇಕ ನಡೆದಿದೆ. 20 ಸಾವಿರಕ್ಕೂ ಅಧಿಕ ಮಂದಿ ಅನ್ನದಾನದಲ್ಲಿ ಪಾಲ್ಗೊಂಡಿದ್ದಾರೆ. ಹಿಂಗಾರ, ಕೇದಗೆ, ಸಂಪಿಗೆ ಸೇರಿದಂತೆ ವಿಶೇಷ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಸಮರ್ಪಣೆಯಾಗಿವೆ ಎಂದು ದೇವಳದ ಕಚೇರಿ ಮೂಲಗಳು ತಿಳಿಸಿವೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದೇವಸ್ಥಾನದಲ್ಲಿ ನಾಗದೇವರಿಗೆ ಹಾಲು, ಸೀಯಾಳಾಭಿಷೇಕ ನಡೆಯಿತು. ದೇವಳದ ಅರ್ಚಕರು ಪೂಜಾ ವಿಧಿವಿಧಾನ ನೆರವೇರಿಸಿದರು. ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಸಮರ್ಪಿಸಿದರು.
ಮಂಜೇಶ್ವರ ಶ್ರೀಅನಂತೇಶ್ವರ ದೇವಳದ ಹೊರಗಿನ ನಾಗಕಟ್ಟೆಯಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆ ಸಹಿತ ಕೇರಳದ ಸಾವಿರಾರು ಭಕ್ತರು ಅಭಿಷೇಕದಲ್ಲಿ ಪಾಲ್ಗೊಂಡರು.
ಮಳೆ ಬಿಡುವು: ನಾಗರ ಪಂಚಮಿಗೆ ನಿರಂತರ ಮಳೆ ಬರುವುದು ವಾಡಿಕೆ. ಆದರೆ ಈ ಬಾರಿಯ ನಾಗರ ಪಂಚಮಿಗೆ ಮಳೆ ಬಿಡುವು ನೀಡಿತ್ತು. ದಿನವಿಡೀ ಉತ್ತಮ ಬಿಸಿಲಿನ ವಾತಾವರಣವಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿದರು.
ತಂಬಿಲ ಸೇವೆ, ಅಭಿಷೇಕ
ದ.ಕ. ಜಿಲ್ಲೆಯ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ, ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥನ ಸನ್ನಿಧಿ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಮಹಾಲಿಂಗೇಶ್ವರ, ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ನಾಗನಕಟ್ಟೆ, ತೋಕೂರು ಸುಬ್ರಹ್ಮಣ್ಯ ದೇವಸ್ಥಾನ ಸಹಿತ ದ.ಕ. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ತಂಬಿಲ ಸೇವೆ, ಪೂಜೆಗಳು ನಡೆಯಿತು.