ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಮಂಗಳವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹನುಮ ಜಯಂತಿ ಅಂಗವಾಗಿ ದೇವಾಲಯದಲ್ಲಿ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಸಮೀರಾ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಭಕ್ತಾದಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.
ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಅವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.