ಮೈಸೂರು: ಮಹಾಶಿವರಾತ್ರಿ ಅಂಗವಾಗಿ ನಗರದ ಶಿವದೇವಾಲಯಗಳು, ಮಠ, ಮಂದಿರಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಆರಾಧನೆ, ಜಾಗರಣೆ, ಭಜನೆ ಮೂಲಕ ಶಿವನನ್ನು ಸ್ತುತಿಸಲಾಯಿತು. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಏಕಾದಶವಾರ ರುದ್ರಾಭಿಷೇಕ, ಅಷ್ಟಾವಾಧಾನ ಸೇವಾ ಪೂಜಾ ಕೈಂಕರ್ಯಗಳು, ಅಖಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯದ ತ್ರಿನೇಶ್ವರ ಸ್ವಾಮಿ ದೇವರಿಗೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವರಾತ್ರಿಯಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಈ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಮುಂಜಾನೆಯಿಂದ ರಾತ್ರಿ ಇಡೀ ದೇವರ ದರ್ಶನ ಪಡೆಯಲಾಯಿತು. ಶುಕ್ರವಾರ ಬೆಳಗ್ಗೆ ದೇವಾಲಯದಲ್ಲಿ ಅರ್ಚನೆ, ಅಭಿಷೇಕದೊಂದಿಗೆ ಮೂಲದೇವರಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಯಿತು. ಜಿಲ್ಲಾ ಖಜಾನೆಯಿಂದ ತಂದ ಚಿನ್ನದ ಕೊಳಗವನ್ನು (ಮುಖವಾಡ) ಶಿವಲಿಂಗಕ್ಕೆ ಧಾರಣೆ ಮಾಡಿದ್ದಲ್ಲದೇ ಹೂ, ಬಿಲ್ವಪತ್ರೆಯಿಂದ ಅಲಂಕಾರಗೊಳಿಸಲಾಯಿತು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಸಂದರ್ಭದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇತ್ರ ಸ್ವಾಮಿ ದೇವಾಲಯ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಹಾಗೂ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಚಿನ್ನದ ಕೊಳಗ ಕೊಡುಗೆಯಾಗಿ ನೀಡಲಾಗಿತ್ತು.
ನಂಜನಗೂಡು ಹಾಗೂ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಿತ್ಯ ಚಿನ್ನದ ಕೊಳಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಭದ್ರತೆ ದೃಷ್ಟಿಯಿಂದ ಶ್ರೀ ತ್ರಿನೇಶ್ವರ ಸ್ವಾಮಿ ದೇವಸ್ಥಾನದ ಕೊಳಗವನ್ನು ಜಿಲ್ಲಾ ಖಜಾನೆಯಲ್ಲಿ 1982ರಿಂದ ಇಡಲಾಗುತ್ತಿದ್ದು, ವರ್ಷಕ್ಕೊಮ್ಮೆ (ಶಿವರಾತ್ರಿ ಮುನ್ನಾ ದಿನ) ಮಾತ್ರ ಹೊರತೆಗೆದು ಶಿವರಾತ್ರಿಯಂದು ಪೂಜೆ ಸಂದರ್ಭದಲ್ಲಿ ಬಳಸುವ ಸಂಪ್ರದಾಯ ಇದೆ. ಕೊಳಗವನ್ನು ದೇವಾಲಯಕ್ಕೆ ತಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಿ ಕೊಠಡಿಯೊಂದರಲ್ಲಿ ಭದ್ರವಾಗಿ ಇಡಲಾಯಿತು.
ನಗರದ ರಾಮಾನುಜ ರಸ್ತೆಯಲ್ಲಿರುವ ಕಾಮೇಶ್ವರ-ಕಾಮೇಶ್ವರಿ ದೇವಸ್ಥಾನದಲ್ಲಿ ಏಕಾದಶವಾರ ರುದ್ರಾಭಿಷೇಕ, ಅಷ್ಟಾವಾಧಾನ ಸೇವೆ ಮತ್ತು ವಿಶೇಷ ಪೂಜಾ ಕೈಂಕರ್ಯಗಳು, ಅಖಂಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಮ್ಮನವರ ಸಹಿತ ವಿಜಯ ವಿಶ್ವೇಶ್ವರಸ್ವಾಮಿ, ಪ್ರಾಕಾರೋತ್ಸವ ನಡೆಯಿತು. ಗುರುಕುಲದಲ್ಲಿರುವ 108 ಶಿವಲಿಂಗಗಳ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂತು. ಎಲ್ಲ ಶಿವಲಿಂಗಗಳಿಗೂ ವಿವಿಧ ಬಗೆಯ ಅಭಿಷೇಕಗಳು, ಬೆಳಗಿನ ಜಾವದಿಂದಲೇ ಶಿವಲಿಂಗಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.
ವಿ.ವಿ.ಮೊಹಲ್ಲಾ ದೇವಸ್ಥಾನ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉತ್ಸವದ ಅಭಿಷೇಕಗಳು, ಅರ್ಚನೆ, ಪೂಜೆ ಜರುಗಿತು. ಕೆ.ಜಿ.ಕೊಪ್ಪಲು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಜರುಗಿತು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಶಿವನಮೂರ್ತಿ ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಗರಡಿಕೇರಿ, ಪಡುವಾರಹಳ್ಳಿಯ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಹಾಲಭಿಷೇಕ, ಬಿಲ್ವಾರ್ಚನೆ, ನಿವೇದನೆ, ದೂಪದಾರತಿ, ತುಪ್ಪದಾರತಿ, ಹೂವಿನ ಅಲಂಕಾರ, ಮಹಾಮಂಗಳಾರತಿ ನಡೆಯಿತು. ಸಂಜೆ ಸ್ವಾಮಿಯವರ ಉತ್ಸವಮೂರ್ತಿ ಹಾಗೂ ಸುವರ್ಣ ಕೊಳಗದ ಮೆರವಣಿಗೆ ಮಾಡಲಾಯಿತು.
ಕುವೆಂಪುನಗರ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆಯ ನಂತರ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಜರುಗಿತು. ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗಿತ್ತು. ಜಾಗರಣೆ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು. ಶಿವಮಂತ್ರ ಹಾಗೂ ಶಿವನ ಕುರಿತಾದ ಭಕ್ತಿಗೀತೆ ಗಾಯನ ನಡೆಯಿತು.
ಸಂಜೆಯ ನಂತರ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಜರುಗಿತು. ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನ ಹಾಗೂ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.