ಸಾಗರದ ಶಿವಪ್ಪನಾಯಕ ವೃತ್ತದಲ್ಲಿರುವ ದರ್ಗಾದಲ್ಲಿ ಚಂದ್ರಯಾನ ಯಶಸ್ವಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. 
ಜಿಲ್ಲೆ

ದೇವಾಲಯ, ದರ್ಗಾಗಳಲ್ಲಿ ವಿಶೇಷ ಪೂಜೆ

Shivamogga - Desk - Praveena Kumar S

ಸಾಗರ: ಚಂದ್ರಯಾನ-3 ಯಶಸ್ವಿಯಾಗಲು ಪ್ರಾರ್ಥಿಸಿ ಬುಧವಾರ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕ ಜಗದೀಶ್ ಭಟ್ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ನೆಲೆಯೂರುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಕೆ.ಎಚ್.ಸುಧೀಂದ್ರ ಮಾತನಾಡಿ, 140 ಕೋಟಿ ಭಾರತೀಯರು ಅತ್ಯಂತ ರೋಮಾಂಚನಗೊಳ್ಳುವ ಕ್ಷಣವನ್ನು ಇಸ್ರೋ ತಂದುಕೊಟ್ಟಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಎಲ್ಲ ಸಿದ್ದತೆಯನ್ನು ಸಮರ್ಥವಾಗಿ ನಮ್ಮ ಹೆಮ್ಮೆಯ ವಿಜ್ಞಾನಿಗಳು ಮಾಡಿದ್ದಾರೆ. ಚಂದ್ರನ ಮೇಲೆ ನೆಲೆಯೂರಿದ ಮೊದಲ ದೇಶ ಭಾರತ ಎನ್ನುವುದನ್ನು ನೆನಪಿಸಿಕೊಂಡರೆ ಮೈರೋಮಾಂಚನಗೊಳ್ಳುತ್ತದೆ. ಅತಿ ಕಡಿಮೆ ದರದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡುತ್ತಿರುವುದು ಯುವಪೀಳಿಗೆಗೆ ಮಾರ್ಗದರ್ಶನವಾಗುತ್ತದೆ. ಭಾರತ ಅಂತರಿಕ್ಷದಲ್ಲೂ ವಿಶ್ವಗುರುವಾಗುವ ಕ್ಷಣಕ್ಕೆ ನಾವೆಲ್ಲ ಸಾಕ್ಷೀಭೂತರಾಗುತ್ತಿದ್ದೇವೆ ಎಂದು ಹೇಳಿದರು.ಪ್ರಮುಖರಾದ ಕೋಮಲ್ ರಾಘವೇಂದ್ರ ಮಾತನಾಡಿ, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಯಲಿ ಎಂದು ವಿಶೇಷ ಪ್ರಾರ್ಥನೆಯನ್ನು ಊರಿನ ಅಧಿದೇವತೆ ಗಣಪತಿಗೆ ಸಲ್ಲಿಸಿದ್ದೇವೆ. ಭಾರತ ದೇಶ ಅನೇಕ ಐತಿಹಾಸಿಕ ಸಾಧನೆ ಮಾಡುತ್ತಿದ್ದು ಅದರ ಮುಂದುವರಿದ ಭಾಗ ಚಂದ್ರಯಾನ ಯಶಸ್ಸು ಸೇರಿಕೊಳ್ಳಲಿದೆ ಎಂದರು. ರಾಘವೇಂದ್ರ ಕಾಮತ್, ಆಟೋ ಗಣೇಶ್, ಶ್ರೀಧರ್ ಸಾಗರ್ ಇತರರಿದ್ದರು. ನಗರದ ಶಿವಪ್ಪನಾಯಕ ವೃತ್ತದಲ್ಲಿರುವ ಹಜರತ್ ಸೈಯದ್ ರಾಜಾ ಬಕ್ಷಾವಲಿ ಅಲ್ಲಾಹ್ ದರ್ಗಾದಲ್ಲಿ ಮಂಗಳವಾರ ರಾತ್ರಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಯುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾ ಸಮಿತಿ ಅಧ್ಯಕ್ಷ ಅಕ್ಬರ್ ಖಾನ್ ಮಾತನಾಡಿ, ಭಾರತೀಯರಿಗೆ ಇದೊಂದು ಅಭೂತಪೂರ್ವ ಕ್ಷಣವಾಗಲಿದೆ. ದೇಶವಾಸಿಗಳು ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಪಾದ ಊರಲಿ ಎಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಮ್ಮ ದರ್ಗಾದಲ್ಲಿ ಸಹ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಭಾರತೀಯ ವಿಜ್ಞಾನಿಗಳ ಸಾಧನೆಗೆ ಧನ್ಯವಾದ ಹೇಳಲಾಗಿದೆ ಎಂದರು. ಮೌಲಾನಾ ಮಹ್ಮದ್ ಅಶ್ರ್ ರಾಜ್ ಅಶ್ರಫಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಸೈಯದ್ ನಿಯಾಜ್, ಜಮೀಲ್ ಸಾಗರ್, ಸಮಿವುಲ್ಲಾ, ಅಕ್ರಮ್, ರಶೀದ್, ನಜೀರ್ ಇತರರಿದ್ದರು.