ನೆಲಮಂಗಲ: ರಾಮನ ಬಂಟ ಹನುಮನ ಜಯಂತಿಯನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣ ಸೇರಿ ತಾಲೂಕಿನ ಹನುಮ ದೇಗುಲಗಳಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ನೆರವೇರಿದವು.
ಬೆಳಗಿನಿಂದಲೇ ಹನುಮನ ದೇಗುಲಗಳಿಗೆ ಭೇಟಿ ನೀಡಿದ ಭಕ್ತರು ದೇವರ ದರ್ಶನ ಪಡೆದರು.
ನಗರದ ಅಡೇಪೇಟೆ ಹಿಪ್ಪೆ ಆಂಜನೇಯ, ಬೆತ್ತನಗೆರೆ ರಸ್ತೆ ಉತ್ತರಘಟ್ಟ ಆಂಜನೇಯ, ತಿಮ್ಮಶೆಟ್ಟಪ್ಪ ಬಡಾವಣೆ, ಚೆನ್ನಪ್ಪ ಬಡಾವಣೆಯ ಶ್ರೀ ರಾಮಾಂಜನೇಯ, ರಾ.ಹೆದ್ದಾರಿ 4ರ ಜಕ್ಕಸಂದ್ರ ಕ್ರಾಸ್ ಬಳಿಯ ಬೃಹತ್ ಗಾತ್ರದ ಶ್ರೀ ಪ್ರಸನ್ನಾಂಜನೇಯ ಮೂರ್ತಿ, ತಾಲೂಕಿನ ಬೂದಿಹಾಳ್, ವಾಜರಹಳ್ಳಿ, ಬಸವನಹಳ್ಳಿ, ಬೈರಶೆಟ್ಟಿಹಳ್ಳಿಯ ಪುರಾಣ ಪ್ರಸಿದ್ದ ಶ್ರೀ ಬೈಲಾಂಜನೇಯಸ್ವಾಮಿ ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ ಚಿನ್ನ ಮತ್ತು ಬೆಳ್ಳಿ ಆಭರಣದ ಜತೆಗೆ ಫಲಪುಷ್ಪಾಲಂಕಾರ ಮಾಡಲಾಗಿತ್ತು.
ಬೆಂಗಳೂರು ಉತ್ತರ ತಾಲೂಕು ಅಡಕಮಾರನಹಳ್ಳಿ ಬೃಹತ್ ಹನುಮಂತನ ದೇವಾಲಯ, ಬಿಎಂಟಿಸಿ ಬಸ್ ಘಟಕದ ಬಳಿ ಶ್ರೀ ಪ್ರಸನ್ನಾಂಜನೇಯ ದೇಗುಲಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು.
ಅಡೇಪೇಟೆ ಬೆತ್ತನಗೆರೆ ರಸ್ತೆಯಲ್ಲಿನ ಪುರಾಣ ಪ್ರಸಿದ್ಧ ಉತ್ತರಘಟ್ಟ ಆಂಜನೇಯ ಸ್ವಾಮಿ ದೇಗುಲದಲ್ಲಿ ಶನಿವಾರ ಸಂಜೆ ಹೋಮ, ಭಾನುವಾರ ಬೆಳಗ್ಗೆ 7ಕ್ಕೆ ಪಂಚಾಮೃತಾಭಿಷೇಕ, ಮಹಾಮಂಗಾಳರತಿ ಮಾಡಿ, ಪ್ರಸಾದ ವಿತರಿಸಲಾಯಿತು. ದೇವಾಲಯ ಸಮಿತಿಯ ಕಪಾಲಿ ವೆಂಕಟೇಶ್, ಸದಸ್ಯ ಮರಿಯಪ್ಪ, ವಿನಯ್ ಮತ್ತಿತರರು ಇದ್ದರು.
ವಿಶೇಷ ಬೆಣ್ಣೆಅಲಂಕಾರ: ನಗರದ ಅಡೇಪೇಟೆ ಹಿಪ್ಪೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಹಿಪ್ಪೆ ಆಂಜನೇಯ ಸ್ವಾಮಿ ಸೇವಾ ಸಮಿತಿ ಟ್ರಸ್ಟ್‌ನಿಂದ 15 ಕೆಜಿಗೂ ಹೆಚ್ಚಿನ ಬೆಣ್ಣೆ ಅಲಂಕಾರ ಮಾಡಿಸಿದ್ದರು. ಭಕ್ತರಿಗೆ 6 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಗಂಗಾಧರ್‌ರಾವ್, ಕಾರ್ಯದರ್ಶಿ ರಮೇಶ್, ಸದಸ್ಯರಾದ ಶಿವಮೂರ್ತಿ, ಎನ್. ರಮೇಶ್, ಪುಟ್ಟಣ್ಣ, ನಾಗರಾಜು, ಕಾಂತರಾಜು, ಕಾರ್ತಿಕ್ ಮತ್ತಿತರರು ಇದ್ದರು.
ಜಹಾಂಗೀರು ವಿತರಣೆ: ಬಹುತೇಕ ದೇಗುಲಗಳಲ್ಲಿ ಭಕ್ತರಿಗೆ ದೇವಾಲಯ ಸಮಿತಿ ಮತ್ತು ಸೇವಾಕರ್ತರು ಮೈಸೂರ್‌ಪಾಕ್, ಜಹಾಂಗೀರು ವಿತರಿಸದಲ್ಲದೆ, ಅನ್ನ ಸಂತರ್ಪಣೆಯನ್ನೂ ಮಾಡಿದರು.