ಜಿಲ್ಲೆ

ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸ್ಥಾನ ಪಡೆಯುವ ನಿಟ್ಟಿನಲ್ಲಿ ನಗರದ ಕರ್ನಾಟಕ ಇತಿಹಾಸ ಸಂಶೋಧನ ಮಂಡಳ (ಕೆಐಎಸ್​ಎಂ)ದ ಕಚೇರಿಯಲ್ಲಿ ಎರಡು ದಿನಗಳ ಕಾಲ ಶಹರದ ಆಯ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಿಷನ್​-625 ಶೀರ್ಷಿಕೆ ಅಡಿ ವಿಶೇಷ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸುಬೋಧ ಶಿಕ್ಷಣ ಸಮಿತಿ, ಧಾರವಾಡ ಟ್ಯುಟೋರಿಯಲ್​ ಅಸೋಸಿಯೇಷನ್​, ಕರ್ನಾಟಕ ಇತಿಹಾಸ ಸಂಶೋಧನ ಮಂಡಳದ ಸಹಕಾರದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್​ ವಿಷಯಗಳ ಕುರಿತು 65 ವಿದ್ಯಾರ್ಥಿಗಳಿಗೆ ಆಯಾ ವಿಷಯಗಳ ನುರಿತ ತಜ್ಞರಿಂದ ತರಬೇತಿ ನೀಡಲಾಯಿತು.

ಪರೀಕ್ಷೆ ಕೊನೇ ದಿನದವರೆಗೆ ಎದುರಾಗುವ ಸಮಸ್ಯೆಗಳ ಪರಿಹಾರ, ಆರೋಗ್ಯದ ಕಾಳಜಿ, ಸಮಯ ಪ್ರಜ್ಞೆ, ಕಠಿಣ ವಿಷಯಗಳು ಸೇರಿ ಇನ್ನೂ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿಷಯ ತಜ್ಞರಾದ ಅನಿಲ ಕದಂ, ಅರ್ಜುನ್​ ಜಾಧವ, ಸೂರ್ಯಕಾಂತ, ವೀಣಾ ಬಿರಾದಾರ, ಪವನ, ಐ.ಎಚ್​. ಪೂಜಾರ, ದಿನೇಶ ಮಾಹಿತಿ ನೀಡಿದರು.

ಜ. 28, 29ರಂದು ಕನ್ನಡ ಮಾಧ್ಯಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಹ ವಿಶೇಷ ತರಬೇತಿ ಆಯೋಜಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳಾದ ಅಶೋಕ ಸಿಂದಗಿ, ಎಂ.ವಿ. ಅಡಿವೇರ, ಬಸವರಾಜ ಚಿಕ್ಕೂರ, ಎಸ್​.ಕೆ. ಸವಣೂರ, ಸುಧೀಂದ್ರ ದೇಶಪಾಂಡೆ, ಶ್ರೀಧರ ಪುರೋಹಿತ, ಧಾರವಾಡ ಟ್ಯುಟೋರಿಯಲ್​ ಅಸೋಸಿಯೇಷನ್​ ವಿನಾಯಕ ಜೋಶಿ, ನಾಗೇಶ ಅಣ್ಣಿಗೇರಿ, ಗಿರಿಧರ ಕಿನ್ನಾಳ, ರಮೇಶ ಉಳ್ಳಾಗಡ್ಡಿ, ಇತರರು ಇದ್ದರು.