ಮೈಸೂರು: ನಗರದ ನಾರಾಯಣ ಆಸ್ಪತ್ರೆಯಲ್ಲಿ ಹಠಾತ್ ಹೃದಯಾಘಾತ (ಸಡನ್ ಕಾರ್ಡಿಯಾಕ್ ಡೆತ್) ನಿರ್ವಹಣೆಗೆ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಎನ್.ರವಿ ಹೇಳಿದರು.
30ರಿಂದ 40 ವರ್ಷ ವಯಸ್ಸಿನ ಯುವಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಸಾವಿಗೆ ತುತ್ತಾಗುತ್ತಿದ್ದಾರೆ. ಹೃದಯದ ಕವಾಟದಲ್ಲಿ ದುರ್ಮಾಂಸ ಬೆಳೆಯುವುದು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೃದಯಾಘಾತಕ್ಕೂ ಮುನ್ನ ಉಸಿರಾಟ, ಎದೆನೋವು, ತಲೆ ತಿರುಗುವಿಕೆ, ಮೂರ್ಛೆ, ಆಯಾಸ ಕಾಡುತ್ತದೆ. ನಿಯಮಿತ ಹೃದಯ ತಪಾಸಣೆಯಿಂದ ಇದನ್ನು ತಡೆಗಟ್ಟಬಹುದು. ಸಮಸ್ಯೆ ತೀವ್ರವಾಗಿದ್ದರೆ ಶಸ್ತ್ರಚಿಕಿತ್ಸೆ ಬೇಕಾಗಬಹುದು. ಆದ್ದರಿಂದ ಇಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ವೈದ್ಯ ಅಶ್ವಿನ್ ಇದ್ದರು.