ಜಿಲ್ಲೆ

ಸಮಾಜದ ಏಳಿಗೆಗೆ ಲಾಭಾಂಶ ವಿನಿಯೋಗಿಸಿ...

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸಲಹೆ

ಮೀನುಗಾರರ ಸಹಕಾರ ಸಂಘಗಳಿಗೆ ತರಬೇತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯದ ಕರಾವಳಿ ಆರ್ಥಿಕತೆಗೆ ಮೀನುಗಾರಿಕಾ ಕ್ಷೇತ್ರ ದೊಡ್ಡ ಕೊಡುಗೆ ನೀಡುತ್ತಿದೆ. ಸಹಕಾರ ತತ್ವದಡಿ ತಳಹದಿಯಲ್ಲಿ ಮುನ್ನಡೆಯುತ್ತಿದೆ. ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ವ್ಯವಸ್ಥಿತವಾಗಿ ಫಲಾನುಭವಿಗಳ ಮನೆಗೇ ತಲುಪಿಸುವ ಮೂಲಕ ಸಹಕಾರಿ ಸಂಘಗಳು ಮೀನುಗಾರರಿಗೆ ನ್ಯಾಯ ಒದಗಿಸುತ್ತಿವೆ. ಅದರಂತೆಯೇ ಮೀನುಗಾರ ಸಹಕಾರ ಸಂಘಗಳು ಗಳಿಸಿದ ಲಾಭವನ್ನು ಸಮಾಜದ ಏಳಿಗೆಗೂ ವಿನಿಯೋಗಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸಲಹೆ ನೀಡಿದರು.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವ ಮೀನುಗಾರರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​, ಮಲ್ಪೆ ಯಾಂತ್ರಿಕ ದೋಣಿ (ಟ್ರಾಲ್​) ಮೀನುಗಾರ ಸಹಕಾರ ಸಂಘ, ಉಡುಪಿ ಜಿಲ್ಲಾ ಸಹಕಾರ ಇಲಾಖೆ ಆಶ್ರಯದಲ್ಲಿ ಜುಲೈ 19ರಂದು ಆಯೋಜಿಸಿದ್ದ ಉಡುಪಿ ಜಿಲ್ಲೆಯ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳಿಗೆ ಆಡಳಿತ ನಿರ್ವಹಣೆಯ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿ ಹೆಸರಲ್ಲಿ ಗಿಡ

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಹೂವು-ಹಣ್ಣು ಪಡೆಯಲು ಗಿಡ ನೆಡುತ್ತೇವೆ. ಅದರಂತೆ ನಿರಂತರ ಫಲ ಬೇಕಿದ್ದರೆ ಜ್ಞಾನದ ಬೀಜ ಬಿತ್ತಬೇಕು. ಸಹಕಾರ ಕ್ಷೇತ್ರದಿಂದ ಪರಿಸರ ರಕ್ಷಣೆಗಾಗಿ ಜಿಲ್ಲೆಯ 79 ಸಹಕಾರ ಸಂಸ್ಥೆಗಳು ಈವರೆಗೆ 50 ಸಾವಿರಕ್ಕೂ ಅಧಿಕ ಗಿಡ ನೆಟ್ಟಿವೆ. ಒಂದು ಲಕ್ಷ ಗಿಡ ನೆಡುವ ಗುರಿಯಿದ್ದು, ತಾಯಿಯ ಹೆಸರಲ್ಲಿ ವಿದ್ಯಾರ್ಥಿಗಳ ಮೂಲಕ ಆ ಕಾರ್ಯ ಮಾಡಲಾಗುವುದು ಎಂದರು.

ಕುಂದರ್​ಗೆ ಸನ್ಮಾನ

ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಮಾತನಾಡಿದರು. ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಹಾಗೂ ಎರಡು ದಶಕದಿಂದ ಸಂಸ್ಥೆಯನ್ನು ಲಾಭದಲ್ಲಿ ಮುನ್ನಡೆಸುತ್ತಿರುವ ಮಲ್ಪೆ ಯಾಂತ್ರಿಕ ದೋಣಿ (ಟ್ರಾಲ್​) ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್​ ಅವರನ್ನು ಸನ್ಮಾನಿಸಲಾಯಿತು.

ಸಹಕಾರ ಸಂಘಗಳ ಕುರಿತು ಉಪನ್ಯಾಸ

ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಸಹಕಾರ ತತ್ವಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯ ಕುರಿತು ಹಾಗೂ ವಕೀಲ ಶ್ರೀಧರ ಪಿ.ಎಸ್​. ದೇಶದ ಆರ್ಥಿಕ ಪ್ರಗತಿಯಲ್ಲಿ ಮೀನುಗಾರಿಕಾ ಸಹಕಾರ ಸಂಘಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.

ಸಹಕಾರ ಸಂಘಗಳ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರಕುಮಾರ್​, ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ನ ನಿರ್ದೇಶಕರಾದ ವೈ.ಸುಧೀರ, ಸುರೇಶ, ಶ್ರೀಧರ ಪಿ.ಎಸ್​., ಮಲ್ಪೆ ಯಾಂತ್ರಿಕ ದೋಣಿ (ಟ್ರಾಲ್​) ಮೀನುಗಾರರ ಸಂಘದ ಉಪಾಧ್ಯಕ್ಷ ಪ್ರಕಾಶ ಬಂಗೇರ ಉಪಸ್ಥಿತರಿದ್ದರು.

ಕೃಷ್ಣ ಶ್ರೀಯಾನ್​ ಪ್ರಾರ್ಥಿಸಿದರು. ಯೂನಿಯನ್​ನ ಸಿಇಒ ಅನೂಷಾ ಕೋಟ್ಯಾನ್​ ಕಾರ್ಯಕ್ರಮ ನಿರ್ವಹಿಸಿದರು.

ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ರಾಷ್ಟ್ರೀಕೃತ ಬ್ಯಾಂಕ್​ ಮಾದರಿಯಲ್ಲಿಯೇ ಕೇಂದ್ರ ಸಹಕಾರ ಇಲಾಖೆ ಆರಂಭಿಸಿದ ತ್ರಿಭುವನ್​ ಸಹಕಾರ ವಿವಿಯು ಸಹಕಾರ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಲಿದೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ