ವಿಜಯವಾಣಿ ಸುದ್ದಿಜಾಲ ಉಡುಪಿ
ಬ್ಯಾಂಕ್ಗಳೂ ಸಹ ಆಧುನಿಕ ಬದಲಾವಣೆಗೆ ಹೊಂದಿಕೊಂಡು ಒತ್ತಡ ನಿರ್ವಹಣೆ, ಕೌಶಲ ಅಭಿವೃದ್ಧಿಗೆ ತರಬೇತಿಯ ಅಗತ್ಯತೆ ಇರುತ್ತದೆ. ಬ್ಯಾಂಕ್ಗೆ ಆಗಮಿಸುವ ಗ್ರಾಹಕರೇ ನಮ್ಮ ದೇವರು. ಹೀಗಾಗಿ ಎಲ್ಲ ಗ್ರಾಹಕರಿಗೂ ನಮ್ಮ ಸಿಬ್ಬಂದಿ ನಗುಮುಖದ ಉತ್ತಮ ಸೇವೆ ನೀಡುವುದು ಅತ್ಯಗತ್ಯ. ಅದಕ್ಕಾಗಿ ತರಬೇತಿ ನೀಡಲಾಗುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಿಬ್ಬಂದಿಗೆ ಉಡುಪಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರಿನ ಹೆಸರಾಂತ ತರಬೇತಿ ಸಂಸ್ಥೆಯಾದ ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ನ ಶ್ರೀಶ ಕೆ.ಎಂ. ತರಬೇತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ನೀಡಿದ್ದ ಗುರಿ ಸಾಧಿಸಿದ ವಿವಿಧ ಶಾಖೆಗಳ ಸಿಬ್ಬಂದಿಯನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ನಿರ್ದೇಶಕರಾದ ಪುರುಷೋತ್ತಮ ಪಿ. ಶೆಟ್ಟಿ, ಸದಾಶಿವ ನಾಯ್ಕ, ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ನ ವಿ.ಕೆ. ಹೆಬ್ಬಾರ ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ರಾಜೇಶ ವಿ. ಸೇರಿಗಾರ ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ ಕೆ. ವಂದಿಸಿದರು.