ಜಿಲ್ಲೆ

ಕೇವಲ 15 ನಿಮಿಷದಲ್ಲಿ ಎಲ್ಲ ಆಸನ ಭರ್ತಿ...!

ಉಡುಪಿಯಿಂದ ಪ್ರಯಾಗರಾಜ್​ಗೆ ವಿಶೇಷ ರೈಲು

ಮಹಾಕುಂಭಮೇಳಕ್ಕಾಗಿ ಟಿಕೆಟ್​ ಬುಕ್ಕಿಂಗ್​ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕರಾವಳಿ ಭಾಗದ ಜನರಿಗೆ ಫೆ.17ರಂದು ತೆರಳಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದ ರೈಲು ಭರ್ತಿಯಾಗಿದೆ. ಮುಂಗಡ ಟಿಕೆಟ್​ ಬುಕ್ಕಿಂಗ್​ಗೆ ಫೆ.14ರ ಮಧ್ಯಾಹ್ನ 1 ಗಂಟೆಯ ವೇಳೆಗೆ ಅವಕಾಶ ಮಾಡಿಕೊಡಲಾಗಿತ್ತು. ಕೇವಲ 15 ನಿಮಿಷದಲ್ಲೇ ಎಲ್ಲ ಆಸನಗಳು ಭರ್ತಿಯಾಗಿದ್ದು, ಬಹಳ ಜನರಿಗೆ ನಿರಾಸೆಯಾಗಿದೆ.

ಬೆಳಗ್ಗೆ 8 ಗಂಟೆಯಿಂದಲೇ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣ ಸಹಿತ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್​ ಕಾದಿರಿಸಲು ಯಾತ್ರಾರ್ಥಿಗಳು ಕಾದು ಕುಳಿತಿದ್ದರು. ಮಧ್ಯಾಹ್ನ 1 ಗಂಟೆಗೆ ಬುಕ್ಕಿಂಗ್​ ತೆರೆದು 1:15ರೊಳಗೆ ಬಂದ್​ ಆಗಿದ್ದು, ಟಿಕೆಟ್​ ಸಿಗದೆ ಅನೇಕರು ಮರಳಿದರು.

ಯಾತ್ರಾರ್ಥಿಗಳಿಗೆ ಗೊಂದಲ

ಉಡುಪಿಯಿಂದ ಪ್ರಯಾಗ್​ರಾಜ್​ಗೆ ತೆರಳಲು ಮಾತ್ರ ಟಿಕೆಟ್​ ಬುಕ್ಕಿಂಗ್​ಗೆ ಮಧ್ಯಾಹ್ನ ಅವಕಾಶ ನೀಡಲಾಗಿತ್ತು. ಆದರೆ, ಅಲ್ಲಿಂದ ವಾಪಸ್​ ಬರುವ ರೈಲಿನ ಟಿಕೆಟ್​ ಬುಕ್ಕಿಂಗ್​ಗೆ ಆ ವೇಳೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಬಹುತೇಕ ಯಾತ್ರಿಕರು ಗೊಂದಲಕ್ಕೊಳಗಾದರು. ವಿಚಾರ ತಿಳಿದ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ದಿಲ್ಲಿಗೆ ನಿರಂತರ ಸಂಪರ್ಕ ಸಾಧಿಸಿ, ರಾತ್ರಿ 8 ಗಂಟೆಯ ವೇಳೆಗೆ ರಿರ್ಟನ್​ ಬುಕ್ಕಿಂಗ್​ ಅವಕಾಶ ನೀಡಲಾಯಿತು. ಆದರೆ, ಆ ವೇಳೆಗೆ ರೈಲು ನಿಲ್ದಾಣದ ಬುಕ್ಕಿಂಗ್​ ಕೌಂಟರ್​ ಬಂದ್​ ಆಗಿದ್ದವು. ಆನ್​ಲೈನ್​ನಲ್ಲಿ ಮಾತ್ರ ಅವಕಾಶ ನೀಡಿದ್ದರಿಂದ ಪ್ರಯಾಗರಾಜ್​ಗೆ ಹೋಗಲು ಟಿಕೆಟ್​ ಕಾದಿರಿಸಿದ್ದ ಹಲವರಿಗೆ ವಾಪಸ್​ ಬರಲು ಟಿಕೆಟ್​ ಲಭಿಸಲಿಲ್ಲ.

ಒಟ್ಟು 21 ಐಸಿಎಫ್​ ಕೋಚ್​ ಅಳವಡಿಕೆ

ಉಡುಪಿ ನಿಲ್ದಾಣದಿಂದ ಫೆ.17ರಂದು ಮಧ್ಯಾಹ್ನ 12:30ಕ್ಕೆ 'ಮಹಾಕುಂಭ ಸ್ಪೆಷಲ್​ ಟ್ರೈನ್' (ರೈಲು ನಂ.01192) ಹೊರಡಲಿದೆ. ಕುಂದಾಪುರ, ಕಾರವಾರ, ಮಡಗಾಂವ್​, ರತ್ನಗಿರಿ, ರೋಹಾ, ಕಲ್ಯಾಣ್​, ನಾಸಿಕ್​ ಮಾರ್ಗವಾಗಿ ತೆರಳಿ ಫೆ.19ರಂದು ಬೆಳಗ್ಗೆ 6:30ಕ್ಕೆ ಪ್ರಯಾಗ್​ರಾಜ್​ ಜಂಕ್ಷನ್​ ತಲುಪಲಿದೆ. ಅಲ್ಲಿ ಜನರನ್ನು ಇಳಿಸಿ ಫತೇಪುರ, ಗೋವಿಂದಪುರಿ ಇಟ್ಟಾ ಮೂಲಕ ಕುಂಡ್ಲಾ ಜಂಕ್ಷನ್​ನಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿದೆ. ಫೆ.20ರ ಬೆಳಗ್ಗೆ 9:30ಕ್ಕೆ ತುಂಡ್ಲಾ ಜಂಕ್ಷನ್​ನಿಂದ ಹೊರಡುವ ಈ ರೈಲು (ರೈಲು ನಂ.01191) ಸಂಜೆ 6:25ಕ್ಕೆ ಪ್ರಯಾಗ್​ರಾಜ್​ ಜಂಕ್ಷನ್​ಗೆ ಬರಲಿದೆ. ಅಲ್ಲಿಂದ ಪ್ರಯಾಣ ಬೆಳೆಸಿ ಫೆ.22ರ ಸಂಜೆ 6:10ಕ್ಕೆ ಉಡುಪಿ ರೈಲು ನಿಲ್ದಾಣ ತಲುಪಲಿದೆ. ಈ ಇಲೆಕ್ಟ್ರಿಕ್​ ಟ್ರೈನ್​ 96 ಗಂಟೆಗಳ ಅವಧಿಯಲ್ಲಿ 3,500 ಕಿಮೀ ಸಂಚರಿಸಲಿದ್ದು, ಒಟ್ಟು 21 ಐಸಿಎಫ್​ ಕೋಚ್​ ಹೊಂದಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ನನ್ನ ಮನವಿಗೆ ಕೇಂದ್ರ ಸರ್ಕಾರ ಕರಾವಳಿ ಭಾಗದ ಜನರಿಗೆ ಮಹಾಕುಂಭಕ್ಕೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಸಮಯ ತುಂಬ ಕಡಿಮೆ ಇದ್ದುದರಿಂದ ಟಿಕೆಟ್​ ಬುಕ್ಕಿಂಗ್​ ವೇಳೆ ಸಣ್ಣಪುಟ್ಟ ಗೊಂದಲವಾಗಿದ್ದು ನಿಜ. ಎಲ್ಲವೂ ಸರಿಯಾಗಲಿದೆ. ಅಲ್ಲಿಂದ ಮರಳಿ ಬರಲು ಆನ್​ಲೈನ್​ನಲ್ಲಿ ಮಾತ್ರ ಬುಕ್ಕಿಂಗ್​ ವ್ಯವಸ್ಥೆಯಾಗಿದ್ದರಿಂದ ಸಮಸ್ಯೆಯಾಯಿತು. ಇನ್ನೊಂದು ವಿಶೇಷ ರೈಲು ವ್ಯವಸ್ಥೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. | ಕೋಟ ಶ್ರೀನಿವಾಸ್​ ಪೂಜಾರಿ. ಸಂಸದ