ಜಿಲ್ಲೆ

ಡಾ.ಹೆಗ್ಗಡೆಗೆ ವಿಶೇಷ ಶಿವಲಿಂಗ ಮಾಹಿತಿ

Avinash R

ಬೆಳ್ತಂಗಡಿ: ಗುಜರಾತ್‌ನ ಸೋಮನಾಥ ದೇವಸ್ಥಾನದ ಭಗ್ನ ಶಿವಲಿಂಗ ಭಾಗದಿಂದ ತಯಾರಿಸಿದ ಪುಟ್ಟ ಶಿವಲಿಂಗವನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಸ್ವಾಮಿ ವಿಷ್ಣುಪದ್ ಮತ್ತು ಅಗ್ನಿಹೋತ್ರಿ ಸೀತಾರಾಮ ಶಾಸ್ತ್ರಿ ಅವರು ಧರ್ಮಸ್ಥಳಕ್ಕೆ ತಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ.ಹೆಗ್ಗಡೆಯವರಿಗೆ ಮಾಹಿತಿ ನೀಡಿದರು.

ಮಹಮ್ಮದ್ ಘಜ್ನಿಯ ದಾಳಿಯಲ್ಲಿ ಭಗ್ನಗೊಂಡಿದ್ದ ಸೋಮನಾಥ ದೇವಳದ ಲಿಂಗದ ಭಾಗವನ್ನು ಸೀತಾರಾಮ ಶಾಸ್ತ್ರಿಯವರ ಕುಟುಂಬದವರು ಸಂರಕ್ಷಿಸಿ ಸಣ್ಣ ಸಣ್ಣ ಶಿವಲಿಂಗವನ್ನು ನಿರ್ಮಿಸಿ ಇಟ್ಟುಕೊಂಡಿದ್ದರು. ಈ ಬಗ್ಗೆ ಕಂಚಿ ಶ್ರೀ ಶಂಕರಾಚಾರ್ಯರನ್ನು ಭೇಟಿಯಾಗಿ ತಿಳಿಸಿದಾಗ, ನೂರು ವರ್ಷಗಳ ಕಾಲ ಶಿವಲಿಂಗವನ್ನು ಹೊರತೆಗೆಯಬೇಡಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಳಿಕ ಬೆಂಗಳೂರಿನ ಶಿವಾರಾಧಕರಾದ ಸ್ವಾಮೀಜಿಯೊಬ್ಬರಿಗೆ ಲಿಂಗವನ್ನು ಒಪ್ಪಿಸುವಂತೆ ತಿಳಿಸಿದ್ದರು. ಈ ಪುಟ್ಟ ಶಿವಲಿಂಗವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ.ಹೆಗ್ಗಡೆಯವರಿಗೆ ತೋರಿಸಿ ಅದರ ಬಗ್ಗೆ ಮಾಹಿತಿ ನೀಡಿದರು.