ಕಳೆದ ಬಾರಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ಏರ್ಪಟ್ಟಿತ್ತು. 23 ಸ್ಥಾನ ಪಡೆದಿದ್ದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಪಕ್ಷೇತರರು ಹಾಗೂ ಇತರರ ಬೆಂಬಲದಿಂದ ಅಧಿಕಾರ ನಡೆಸಿತ್ತು. ಜೆಡಿಎಸ್ 10 ಸ್ಥಾನ ಗಳಿಸಿದರೆ, ಬಿಜೆಪಿ ಮತ್ತು ಕೆಜೆಪಿ ತಲಾ 7 ಕಡೆ ಗೆದ್ದಿದ್ದವು. ಇದೀಗ ಲೋಕಲ್ ಪಾಲಿಟಿಕ್ಸ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಾಜಿ ಸಿಎಂ ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ ಅಗಲಿಕೆ ಮತ್ತು ಹಿರಿಯ ನೇತಾರ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯವಾಗಿ ಮೊದಲಿನಂತೆ ಸಕ್ರಿಯ ಇರದಿರುವುದು ಕೈ ಶಕ್ತಿಯನ್ನು ಸಹಜವಾಗಿಯೇ ಕುಗ್ಗಿಸಿದೆ. ಇಂಥ ಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಹೇಗಾದರೂ ಸರಿ, ಪಾಲಿಕೆ ಮೇಲೆ ಕೇಸರಿ ಝುಂಡಾ ಹಾರಿಸಲು ತಂತ್ರ ಹೆಣೆಯುತ್ತಿದೆ.
ಪಾಲಿಕೆ ಕಲಬುರಗಿ ಉತ್ತರ (28 ವಾರ್ಡ್) ಮತ್ತು ದಕ್ಷಿಣ (27 ವಾರ್ಡ್) ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ, ಉತ್ತರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉತ್ತರ ಕ್ಷೇತ್ರದ ಅರ್ಧಕ್ಕೂ ಹೆಚ್ಚು ವಾರ್ಡ್ ಅಲ್ಪಸಂಖ್ಯಾತರ ಪ್ರಾಬಲ್ಯ ಹೊಂದಿವೆ. ಕಾಂಗ್ರೆಸ್ ಇಂಥ ವಾರ್ಡ್ಗಳನ್ನೇ ಹೆಚ್ಚಾಗಿ ನಂಬಿದೆ. ಆದರೆ ಇದೇ ಮೊದಲ ಸಲ ಎಂಐಎಂ 20 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದ್ದು, ಉತ್ತರ ಕ್ಷೇತ್ರ ಮೇಲೆ ನಿಗಾ ಕೇಂದ್ರೀಕರಿಸಿದೆ. ಕಾಂಗ್ರೆಸ್ ಎಲ್ಲ 55 ವಾರ್ಡ್ಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 47, ಜೆಡಿಎಸ್ 45, ಆಪ್ 26ರಲ್ಲಿ ಕಣಕ್ಕಿಳಿದಿದೆ. 83 ಪಕ್ಷೇತರರಿದ್ದಾರೆ. ಇವರಲ್ಲಿ ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಂಚಿತರೂ ಸೇರಿದ್ದು, ಬಂಡಾಯದ ಬಿಸಿ ಜೋರಾಗಿಯೇ ತಟ್ಟಿದೆ. ಕಳೆದ ಸಲ 7 ಸ್ಥಾನ ಪಕ್ಷೇತರರ ಪಾಲಾಗಿದ್ದವು. ಈಗಲೂ ಕೆಲವೆಡೆ ಇವರು ಜಿದ್ದಿನ ಸಂಘರ್ಷ ನಡೆಸಿದ್ದಾರೆ. ಸದ್ಯದ ಕಣದ ಚಿತ್ರಣ ಅವಲೋಕಿಸಿದರೆ ಮತ ವಿಭಜನೆ ಪಕ್ಕಾ ಎನಿಸಿದ್ದು, ಎಲ್ಲ ಲೆಕ್ಕಾಚಾರಗಳು ಉಲ್ಟಾ-ಪಲ್ಟಾ ಮಾಡಬಹುದಾಗಿದ್ದರಿಂದ ಪಾಲಿಕೆ ಗದ್ದುಗೆಗೆ ಏರೋರು ಯಾರು ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ 2 ಅವಧಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವ ಉತ್ಸಾಹ ಇಲ್ಲಿನ ಮುಖಂಡರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಬಾರಿ 60 ವಾರ್ಡ್ಗಳಿದ್ದವು. ಈ ಬಾರಿ ಮರುವಿಂಗಡಣೆ ನಂತರ 82 ವಾರ್ಡ್ಗಳು ರಚನೆಯಾಗಿವೆ. ಶೇ.50 ವಾರ್ಡ್ಗಳಲ್ಲಿ ಮಹಿಳಾ ಮೀಸಲಾತಿ ಇರುವುದರಿಂದ ಸ್ತ್ರೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ.
ಬಿಜೆಪಿ ಶಾಸಕರ ಪ್ರಾಬಲ್ಯ: ಒಟ್ಟು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರಲ್ಲಿ ಬಿಜೆಪಿ ಶಾಸಕರಿದ್ದಾರೆ. ತಲಾ 25 ವಾರ್ಡ್ಗಳಿರುವ ಹು-ಧಾ ಸೆಂಟ್ರಲ್ ಹಾಗೂ ಹು-ಧಾ ಪಶ್ಚಿಮ, 9 ವಾರ್ಡ್ಗಳಿರುವ ಧಾರವಾಡ ವಿಧಾನಸಭೆ ಕ್ಷೇತ್ರ ತೆಕ್ಕೆಯಲ್ಲಿದ್ದರೆ, 23 ವಾರ್ಡ್ಗಳಿರುವ ಹು-ಧಾ ಪೂರ್ವ ಕ್ಷೇತ್ರ ಕಾಂಗ್ರೆಸ್ ಶಾಸಕರ ಕೈಯಲ್ಲಿದೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ, ಅಮೃತ ಸಿಟಿ, ಸಮಗ್ರ ನಗರಾಭಿವೃದ್ಧಿ ಯೋಜನೆ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಕಣ ರಂಗೇರುತ್ತಿದೆ. ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸೋಮವಾರದಿಂದ ರಾಜ್ಯ ಮಟ್ಟದ ನಾಯಕರ ದಂಡೇ ಬೆಳಗಾವಿಗೆ ಆಗಮಿಸಲಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸುವುದೇ ಈಗ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿಯ 27 ಜನ ಕಣದಲ್ಲಿದ್ದರೆ, ಜೆಡಿಎಸ್ನ 12 ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಎಂಇಎಸ್ ನಿರ್ನಾಮ: ‘ಭಾಷಾ’ ವಿವಾದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮುಖಂಡರಿಗೆ ಪಾಲಿಕೆ ಚುನಾವಣೆಯು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೇಗಾದರೂ ಮಾಡಿ 8-10 ಸ್ಥಾನಗಳನ್ನಾದರೂ ಗೆಲ್ಲಬೇಕೆಂದು ಎಂಇಎಸ್ ಕೆಲ ಕಡೆಗಳಲ್ಲಿ ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ 49 ವಾರ್ಡ್ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 9 ಕಡೆ ಎಂಇಎಸ್ ಜತೆ ಅಪರೋಕ್ಷವಾಗಿ ಕೈಜೋಡಿಸಿದೆ.