ಮಂಡ್ಯ: ಯುವನಿಧಿ ಯೋಜನೆಯಡಿ 2022-23 ಮತ್ತು 2023-24ನೇ ಸಾಲಿನಲ್ಲಿ ಸ್ನಾತಕ ಪದವಿ/ಸ್ನಾತಕೋತ್ತರ ಪದವಿ ಮತ್ತು ಡಿಪ್ಲಮೊ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಅರ್ಹ ಅಭ್ಯರ್ಥಿಗಳು <https://sevasindhugs.karnataka.gov.in> ವೆಬ್‌ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜ.6 ರಿಂದ 20 ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸ ಪೂರೈಸಿ ಹೆಸರನ್ನು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ನಂತರ ಪ್ರತಿ ತಿಂಗಳು ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಿದ್ದರೆ, ತಾನು ನಿರುದ್ಯೋಗಿಯೆಂದು, ಉನ್ನತ ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಪ್ರತಿ ತಿಂಗಳ 25ನೇ ತಾರೀಖಿನೊಳಗಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಮಾಡಬೇಕು. ಅಭ್ಯರ್ಥಿಗಳು ಕರ್ನಾಟಕ ಒನ್/ಗ್ರಾಮ ಒನ್ ಮತ್ತು ಬಾಪೂಜಿ ಕೇಂದ್ರದಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್ ನೀಡಬೇಕು. ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ಒಂದು ವೇಳೆ ಅರ್ಜಿ ಪುರಸ್ಕೃತಗೊಳ್ಳದಿದ್ದಲ್ಲಿ ಸೂಚಿಸಲ್ಪಟ್ಟ ಇಲಾಖೆಯ ಕಚೇರಿಗೆ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ನೀಡಬೇಕು. ಮಾಹಿತಿಗೆ ದೂ.ಸಂ 08232-295124 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.