ಕಲಾದಗಿ: ಗ್ರಾಮದ ಸಾಯಿ ಮಂದಿರದಲ್ಲಿ ಸನಾತನ ಉತ್ಸವಗಳ ಆಚರಣಾ ಸಮಿತಿಯಿಂದ ಕಾಶ್ಮೀರದ ಪಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರಿಂದ ನಡೆದ ಅಮಾನುಷ ದಾಳಿಯ ಪ್ರತೀಕಾರವಾಗಿ ಭಾರತೀಯ ಸೈನ್ಯ ನಡೆಸಿದ ‘ಆಪರೇಷನ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಾಯಿಬಾಬಾರಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಪತ್ರಕರ್ತ ನಿತೀಶ ಪಾಟೀಲ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸೌಭಾಗ್ಯ, ದುರ್ಗೆಯ ಶಕ್ತಿಯ ಸಂದೇಶವೇ ಸಿಂಧೂರ ಹೆಸರಿನ ಅರ್ಥ. 1971ರ ನಂತರ ಇದೇ ಮೊದಲ ಬಾರಿ ಭಾರತೀಯ ಸೈನ್ಯದ ವಾಯು ಪಡೆ ಪಿಓಕೆ ಹಾಗೂ ಪಾಕಿಸ್ತಾನ ಒಳ ಹೊಕ್ಕು ಲಷ್ಕರ ಏ ತೊಯ್ಬ, ಹಿಜ್ಬುಲ್ಲಾದಂತಹ ಭಯೋತ್ಪಾದಕ ಸಂಘಟನೆೆಗಳ ಪ್ರಮುಖ ತಾಣಗಳನ್ನು ಧ್ವಂಸ ಮಾಡಿ 80ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದು ಅಭಿನಂದನೀಯ ಎಂದರು.
ಗ್ರಾಪಂ ಸದಸ್ಯ ಅಜಯ ಕುಲಕರ್ಣಿ ಮಾತನಾಡಿ, ನಮ್ಮ ಹೆಮ್ಮೆಯ ಸೈನಿಕರು ಎದೆಗುಂದದೆ ಮುನ್ನುಗ್ಗಿ ಶತ್ರುಗಳನ್ನು ಸಂಹರಿಸಲಿ ಎಂದು ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸಾಯಿಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಮುಖಾಂತರ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.
ಪ್ರಕಾಶ ಗಾಣಿಗೇರ, ಪ್ರತಾಪ ಪವಾರ, ಶ್ರೀಧರ ದಂತಿ, ಮಲ್ಲಿಕಾರ್ಜುನ ರಂಗನ್ನವರ, ಬ್ರಹ್ಮಾನಂದ ಬಡಿಗೇರ, ಹೊಳಬಸು ಪಾಣಿಶೆಟ್ಟಿ, ಸುರೇಶ ಕುಂಬಾರ, ಸಿದ್ದಯ್ಯ ಚೌಕಿಮಠ, ಹರೀಶ ಆಸಂಗಿ, ಆಕಾಶ ಮೆಡ್ಲಿ, ರಾಕೇಶ ಗುಂಜುಟಗಿ, ಸಾಯಿರಾಮ ಕುಕರ್ಣಿ, ಪಡದಯ್ಯ ಚೌಕಿಮಠ ಮತ್ತಿತರರಿದ್ದರು.