ಕಾರ್ತಿಕ ಹುಣ್ಣಿಮೆ ಅಂಗವಾಗಿ ಮದ್ದೂರು ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರ ಮಾಡಿರುವುದು. 
ಜಿಲ್ಲೆ

ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ಮದ್ದೂರು: ಕಾರ್ತಿಕ ಹುಣ್ಣಿಮೆಯ ಅಂಗವಾಗಿ ಬುಧವಾರ ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ದೇವರಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಬೆಣ್ಣೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ವಿಶೇಷವಾಗಿ ವಿದ್ಯುತ್ ಹಾಗೂ ಹೂವುಗಳ ಅಲಂಕಾರ ಮಾಡಿದ್ದು ಭಕ್ತಾದಿಗಳ ಗಮನ ಸೆಳೆಯಿತು.

ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ದೇಗುಲದ ಆವರಣದಲ್ಲಿ ಶ್ರೀನಿವಾಸ ದೇವರ ಉತ್ಸವ, ದೀಪೋತ್ಸವ ಅದ್ದೂರಿಯಾಗಿ ಜರುಗಿತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಾಮಂಗಳಾರತಿ ಹಾಗೂ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಮಾತನಾಡಿ, ಕಾರ್ತಿಕ ಹುಣ್ಣಿಮೆ ಅತ್ಯಂತ ವಿಶೇಷ ದಿನವಾಗಿದ್ದು, ಶ್ರದ್ಧಾಭಕ್ತಿಯಿಂದ ದೇವರನ್ನು ಪೂಜಿಸಿ ಸ್ಮರಣೆ ಮಾಡಿದರೆ ಭಕ್ತಾದಿಗಳು ಇಷ್ಟಾರ್ಥ ಈಡೇರುತ್ತದೆ. ಆದ್ದರಿಂದ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.