ಜಿಲ್ಲೆ

ತೋಂಟದಾರ್ಯ ಮಠದಲ್ಲಿ ವಿಶೇಷ ಕಾರ್ಯಕ್ರಮ ನಾಳೆಯಿಂದ

ಸೋಮನಾಥ ರೆಡ್ಡಿ

ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ನಡೆಯುತ್ತಿರುವ ಶರಣ ಚರಿತಾಮೃತ ಪ್ರವಚನದ ಅಂಗವಾಗಿ ಜು. 20ರಿಂದ 23ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.20 ರಂದು ಸಂಜೆ 7ಕ್ಕೆ ಜನಪದ ಸಂಭ್ರಮ ಕಾರ್ಯಕ್ರಮ ಜರುಗುವುದು. ಬೇಲೂರು ವಿರಕ್ತಮಠದ ಶ್ರೀ ಮಹಾಂತ ಸ್ವಾಮೀಜಿ ನೇತೃತ್ವ ವಹಿಸುವರು. ಶ್ರೀಗೋಣಿರುದ್ರ ಸ್ವಾಮೀಜಿ ಉಪಸ್ಥಿತರಿರುವರು. ಜನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಉಪನ್ಯಾಸ ನೀಡುವರು ಎಂದರು.

ಜು. 21ರಂದು ಸಂಜೆ 7 ಗಂಟೆಗೆ ಪತ್ರಿಕಾ ದಿನಾಚರಣೆ ಜರುಗುವುದು. ಶ್ರೀ ಸಿದ್ದಬಸವ ಸ್ವಾಮೀಜಿ ನೇತೃತ್ವ ವಹಿಸುವರು. ಬಸವಾನಂದ ಸ್ವಾಮೀಜಿ, ಶ್ರೀ ಋಷಿಕೇಶಾನಂದ ಸ್ವಾಮೀಜಿ ಉಪಸ್ಥಿತರಿರುವರು. ಬಸವ ದೇವರು ಉಪನ್ಯಾಸ ನೀಡುವರು. ರವಿ ದಂಡಿನ, ಶಿವರುದ್ರಗೌಡ ಪಾಟೀಲ, ಬಸವರಾಜ ಸಾಲಿಮಠ, ಶಂಕ್ರಪ್ಪ ಕುಪಸ್ತ, ಅಮರೇಶಪ್ಪ ಬಳ್ಳಾರಿ, ಬಸವರಾಜ ಬಳ್ಳೊಳ್ಳಿ, ರಾಜೇಶ ಸಶಿಮಠ ಅವರನ್ನು ಸತ್ಕರಿಸಲಾಗುವುದು. ನಂತರ ಧಾರವಾಡದ ವಚನ ವೈಭವ ರತಿಕಾ ನೃತ್ಯ ಶಾಲೆ ಕಲಾವಿದರಿಂದ ವಚನ ವೈಭವ ಕಾರ್ಯಕ್ರಮ ನಡೆಯುವುದು. 22 ರಂದು ಸಂಜೆ 7 ಗಂಟೆಗೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರವಚನ ಮಂಗಲೋತ್ಸವ ಜರಗುವುದು. ಗುಳೇದಗುಡ್ಡದ ಶ್ರೀ ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಶ್ರೀ ಬಸವೇಶ್ವರಿ ಮಾತಾಜಿಯವರಿಂದ ಅನುಭಾವ ಜರುಗುವುದು. ಬಸಯ್ಯ ಗಿಂಡಿಮಠ ಅಧ್ಯಕ್ಷತೆ ವಹಿಸುವರು. ವಿಜಯರತ್ನ ಪ್ರಶಸ್ತಿ ಪುರಸ್ಕೃತ ಆನಂದಗೌಡ ಪಾಟೀಲ ಅವರನ್ನು ಸತ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ ಮಾತನಾಡಿ, ಶ್ರೀ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಜು.23ರಂದು ಬೆಳಗ್ಗೆ 9ಗಂಟೆಗೆ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರ ಮತ್ತು ಬಸವಣ್ಣನವರ ಪಂಚಲೋಹ ಮೂರ್ತಿ ಹಾಗೂ ವಚನ ಗ್ರಂಥಗಳ ನೂತನ ಪಲ್ಲಕ್ಕಿ ಉತ್ಸವ ಜರುಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಎಚ್. ವಿರೂಪಾಕ್ಷಗೌಡ್ರ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ವೀರಪ್ಪ ಮಡಿವಾಳರ, ಪಾಲಾಕ್ಷಿ ಗಣದಿನ್ನಿ, ಪವನ ಚೋಪ್ರಾ, ಶಿವಯೋಗಿ ಕೊಪ್ಪಳ, ಸುರೇಶ ಬಣಕಾರ, ಸದಾಶಿವಯ್ಯ ಕಬ್ಬೂರಮಠ ಇತರರು ಇದ್ದರು.