ಕಾಗವಾಡ: ತಾಲೂಕಿನ ಉಗಾರ ಬುದ್ರಕ್ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಶ್ರೀ ಪದ್ಮಾವತಿ ದೇವಿಗೆ ಈಚೆಗೆ
ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ದೇವಿಯ ಭವ್ಯ ಮೆರವಣಿಗೆ ಕೃಷ್ಣಾ ನದಿ ವರೆಗೆ ಸಾಗಿತು. ದೇವಿಯ 3.5 ಕೆ.ಜಿ. ತೂಕದ ಚಿನ್ನದ ಮೂರ್ತಿಗೆ ಹಾಲು, ತುಪ್ಪ, ಮೊಸರು, ಅಷ್ಟದ್ರವ್ಯಗಳು, ಶ್ರೀಫಲ ಮತ್ತು ಬೆಳೆಗಳಿಂದ ಅಭಿಷೇಕ ನೆರವೇರಿಸಿದರು.
ಸೋಂದಾ ಜೈನಮಠದ ಭಟ್ಟಾಕಲಂಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪಂಚಾಮೃತ ಅಭಿಷೇಕಕ್ಕೆ ಬಳಸಿದ ಹಾಲು, ತುಪ್ಪ, ಅಷ್ಟದ್ರವ್ಯಗಳನ್ನು ನದಿಗೆ ಸಮರ್ಪಿಸಲಾಯಿತು. ಸಕ್ಕರೆ, ಬೆಳೆ, ಶ್ರೀಫಲ ಮತ್ತು ಹಣ್ಣುಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವಿವಿಧ ವಾದ್ಯಮೇಳಗಳು, ಎರಡು ಅಶ್ವಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ದೇವಿಯ ಪಲ್ಲಕ್ಕಿ ಮೆರವಣಿಗೆ ಭವ್ಯವಾಗಿ ಜರುಗಿತು.
ಸಾವಿರಾರು ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ದೇವಸ್ಥಾನ ಅರ್ಚಕ ಅಶೋಕ ಉಪಾಧ್ಯೆ ಪೂಜಾ ವಿಧಿವಿಧಾನ ನೆರವೇರಿಸಿದರು. ಶೀತಲಗೌಡ ಪಾಟೀಲ ಕುಟುಂಬಸ್ಥರು ಪೂಜೆ ಸಲ್ಲಿಸಿದರು.