ಗೋಕರ್ಣ: ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ಆತ್ಮಲಿಂಗಕ್ಕೆ ಮಂದಿರದ ಹಿರಿಯ ಪ್ರಧಾನ ಅರ್ಚಕ ವೇ.ವಿಶ್ವೇಶ್ವರ ಅಡಿ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರು, ಉಪಾಧಿವಂತ ವೈದಿಕರ ಸಹಯೋಗದೊಂದಿಗೆ ಸುವರ್ಣಶಂಖ ಗಂಗಾಜಲ, ರುದ್ರಾಭಿಷೇಕ ಸಹಿತ ಆಗಮೋಕ್ತ ವಿಶೇಷ ಕಟ್ಟಳೆ ಪೂಜೆ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಿತು.
ಸಾಲಂಕೃತ ಸುವರ್ಣ ನಾಗಾಭರಣ ಸಹಿತವಾದ ಆತ್ಮಲಿಂಗಕ್ಕೆ ಶಾಸ್ತ್ರೋಕ್ತ ನೈವೇದ್ಯ ಸಲ್ಲಿಸಿ ಮಹಾಮಂಗಳಾರತಿ ಮತ್ತು ಪ್ರಾರ್ಥನೆ ಕೈಗೊಳ್ಳಲಾಯಿತು. ಶ್ರಾವಣದ ಕೊನೆ ಸೋಮವಾರ ಪೂಜೆಗಾಗಿ ವಿವಿಧ ರಾಜ್ಯಗಳ ಭಕ್ತರು ಆಗಮಿಸಿ ಕ್ಷೇತ್ರ ಪದ್ಧತಿಯಂತೆ ಕೋಟಿತೀರ್ಥದಲ್ಲಿ ಸ್ನಾನ ಮಾಡಿ ಆತ್ಮಲಿಂಗದೊಂದಿಗೆ ವಿವಿಧ ದೇವತಾ ಪೂಜೆ ಸಲ್ಲಿಸಿದರು.
ಶ್ರಾವಣದ ಕೊನೆಯ ಪೂಜೆಗಾಗಿ ಶುಕ್ರವಾರದಿಂದಲೇ ಭಕ್ತರ ದಟ್ಟಣೆ ಉಂಟಾಯಿತು. ತೀವ್ರ ಮಳೆಯ ನಡುವೆಯೂ ಪ್ರತಿದಿನ 20 ಸಾವಿರಕ್ಕೂ ಹೆಚ್ಚಿನ ವಾಹನಗಳು ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ ಎಸ್.ಆರ್. ಮತ್ತು ಪೊಲೀಸ್ ಸಿಬ್ಬಂದಿ ಸಂಚಾರ ಸುಗಮಗೊಳಿಸಲು ಮತ್ತು ರ್ಪಾಂಗ್ ವ್ಯವಸ್ಥೆಗಾಗಿ ದಿನ ರಾತ್ರಿ ಸೇವೆ ಸಲ್ಲಿಸುವಂತಾಯಿತು. ಮಂಗಳವಾರದಿಂದ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದ್ದು, ಭಾನುವಾರ ಶ್ರಾವಣ ಅಮಾವಾಸ್ಯೆ ಪೂಜೆಯೊಂದಿಗೆ ಮಹಾಬಲೇಶ್ವರ ಮಂದಿರದಲ್ಲಿನ ವಿಶೇಷ ಕಟ್ಟಳೆ ಪೂಜೆ, ಪುಷ್ಪ ಪೂಜೆ, ಪುರಾಣ ಶ್ರವಣ ಮತ್ತಿತರ ಶ್ರಾವಣದ ವಿಶೇಷ ಆರಾಧನೆಗಳು ಸಂಪನ್ನವಾಗಲಿವೆ.