ಕಿಕ್ಕೇರಿ ಹೋಬಳಿಯ ಮಾದಾಪುರ ಕೆಂಕೇರಮ್ಮ ದೇಗುಲದಲ್ಲಿ ಕೆಂಕೇರಮ್ಮ ದೇವಿ ವಾರ್ಷಿಕ ಪೂಜೆ ಅಂಗವಾಗಿ ವಿವಿಧ ಹೋಮ ನೆರವೇರಿತು.  
ಜಿಲ್ಲೆ

ಕೆಂಕೇರಮ್ಮ ದೇವಿಗೆ ವಿಶೇಷ ಪೂಜಾ ಕೈಂಕರ್ಯ

ಕಿಕ್ಕೇರಿ: ನರಕ ಚತುದರ್ಶಿ ಪ್ರಯುಕ್ತ ಹೋಬಳಿಯ ಗಡಿಭಾಗವಾದ ಮಾದಾಪುರ ಗ್ರಾಮದಲ್ಲಿ ಗ್ರಾಮದೇವತೆ ಕೆಂಕೇರಮ್ಮ ದೇವಿಗೆ ಗುರುವಾರ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ವಾರ್ಷಿಕ ಪೂಜೆ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಗ್ರಾಮದ ಹೊರವಲಯದಲ್ಲಿರುವ ದೇವಿಯ ಗುಡಿಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಪ್ರ ವೃಂದದವರು ಆಗಮಿಸಿ ದೇಗುಲದ ಒಳ, ಹೊರಾಲಯವನ್ನು ಗೋಮಯ, ಗಂಧೋದಕ, ಪಂಚಗವ್ಯಗಳಿಂದ ಶುಚಿಗೊಳಿಸಿದರು. ಬಳಿಕ ದೇವಿಗೆ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು.

ವಿವಿಧ ಪರಿಮಳ ಪುಷ್ಪಗಳಿಂದ ದೇವಿಯನ್ನು ಶೃಂಗರಿಸಲಾಗಿತ್ತು. ಮೂಲದೇವಿ, ಉತ್ಸವ ಮೂರ್ತಿಗೆ ವಸ್ತ್ರಾಭರಣ ತೊಡಿಸಲಾಯಿತು. ದೇಗುಲ ಆವರಣವನ್ನು ತಳಿರು ತೋರಣ ಕಟ್ಟಲಾಗಿತ್ತು. ದೇಗುಲ ಎದುರಿನ ಬೃಹತ್ ಅಶ್ವತವೃಕ್ಷಕ್ಕೆ ಗಂಗಾಜಲಾಭಿಷೇಕ ನೆರವೇರಿಸಿ ಪೂಜಿಸಲಾಯಿತು.

ಕೆಂಕೇರಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ, ಗಣಪತಿ, ನವಗ್ರಹ ಮತ್ತಿತರ ಹೋಮ ಹವನಾದಿ ನೆರವೇರಿತು. ಮಹಿಳೆಯರು ಲಲಿತಾ ಸಹಸ್ರನಾಮ ಪಠಿಸಿದರು. ದೇವಿಗೆ ವಿವಿಧ ನೈವೇದ್ಯ ಇಟ್ಟು ಆರತಿ ಬೆಳಗಲಾಯಿತು. ವಿವಿಧ ಸೇವೆಗಳನ್ನು ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ, ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮದ ಸುತ್ತಮುತ್ತಲಿನ ಭಕ್ತರು, ಹೊರಪ್ರದೇಶದಲ್ಲಿ ನೆಲೆಸಿರುವ ದೇವಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಎಂ.ಎನ್.ಸುಬ್ರಹ್ಮಣ್ಯ, ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಎಂ.ಕೆ.ಶ್ರೀಕಂಠ, ಶಿವರಾಂ, ಸೋಮಣ್ಣ, ಗಣೇಶ, ನಾಗಾಜೀ, ಸುರೇಶ್, ರಘುನಾಥಶರ್ಮ, ಮೂರ್ತಿ, ಚಂದ್ರು, ಸೀತಾರಾಮ ಶಾಸ್ತ್ರೀ, ಚಂದ್ರು, ಶಂಕರ ಹಾಜರಿದ್ದರು.

.