ಜಿಲ್ಲೆ

ವಿಶೇಷ ಮೆಮು ರೈಲು ಸಂಚಾರ ಇಂದಿನಿಂದ

Mysuru

ಮೈಸೂರು: ಮೇ 22ರಿಂದ ಮೈಸೂರು ಮತ್ತು ಬೆಂಗಳೂರಿನ ನಡುವೆ ವಿಶೇಷ ಮೆಮು ರೈಲು ಸಂಚರಿಸಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ ಮಾತ್ರ ಈ ಸೇವೆ ಇರುವುದಿಲ್ಲ.

ಬೆಂಗಳೂರು-ಮೈಸೂರು ವಿಶೇಷ ರೈಲು ಗಾಡಿ ಸಂಖ್ಯೆ (06503/06504)ಬೆಳಗ್ಗೆ 9.20ಕ್ಕೆ ಬೆಂಗಳೂರು ಬಿಡಲಿದೆ. ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ. ಮಧ್ಯಾಹ್ನ 1.45ಕ್ಕೆ ಮೈಸೂರು ಬಿಟ್ಟು ಬೆಂಗಳೂರನ್ನು ಸಂಜೆ 5 ಗಂಟೆಗೆ ತಲುಪಲಿದೆ. ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿಯಲ್ಲಿ ಈ ರೈಲು ನಿಲ್ಲಲಿದೆ.

ಆದರೆ ನಿಲ್ದಾಣದಲ್ಲಿ ಟಿಕೆಟ್ ವಿತರಿಸುವುದಿಲ್ಲ. ಸಾರ್ವಜನಿಕರು ಆನ್‌ಲೈನ್ ಮೂಲಕವೇ ಟಿಕೆಟ್ ಪಡೆದು ಬರಬೇಕಿದೆ. ವಿಶೇಷ ಮೆಮು ರೈಲು 14 ಬೋಗಿಗಳನ್ನು ಒಳಗೊಂಡಿದ್ದು, ಪ್ರತಿ ಬೋಗಿಗಳಲ್ಲಿ 106 ಜನರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

‘ಕರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒಂದು ದ್ವಾರದಲ್ಲಿ ಮಾತ್ರ ಪ್ರವೇಶ ನೀಡಲಾಗುವುದು. ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ನಿಗದಿಪಡಿಸಲಾಗಿದೆ. ಹಿಂಭಾಗದ ಪ್ರವೇಶ ದ್ವಾರ ಮತ್ತು ಸಬ್ ವೇಗಳನ್ನು ಬಂದ್ ಮಾಡಲಾಗಿದೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ತಿಳಿಸಿದ್ದಾರೆ.


’ಎಲ್ಲ ಪ್ರಯಾಣಿಕರ ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ಒಳಗೆ ಬಿಡಲಾಗುತ್ತದೆ. ಬೆಂಗಳೂರಿನಿಂದ ಬಂದ ರೈಲಿನ ಎಲ್ಲ ಬೋಗಿಗಳನ್ನು ಸ್ಯಾನಿಟೈಸೇಷನ್ ಮಾಡಿದ ಬಳಿಕವೇ ಪ್ರಯಾಣಿಕರಿಗೆ ಹತ್ತಲು ಅವಕಾಶ ನೀಡಲಾಗುವುದು’ ಎಂದು ಹೇಳಿದ್ದಾರೆ.

ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಯಾನಿಟೈಸರ್, ಪ್ರಯಾಣಕ್ಕೆ ಮಾಡಿಕೊಂಡಿರುವ ಸಿದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.