ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 55,335 ವಿವಿಧ ರೀತಿಯ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಚೆಕ್ ಬೌನ್ಸ್ ಪ್ರಕರಣಗಳೇ ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜು.18 ಮತ್ತು ನ.21ರಂದು ವಿಶೇಷ ಲೋಕ ಅದಾಲತ್ ಮೂಲಕ ಬಗೆಹರಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ತಿಳಿಸಿದರು.
ನಗರದ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ 13,357 ಚೆಕ್ ಬೌನ್ಸ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 3197 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 19.06 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಜು.11 ರಾಷ್ಟ್ರೀಯ ಲೋಕ ಅದಾಲತ್
ಜು.11ರಂದು ವರ್ಷದ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಜಿಲ್ಲೆ ಹಾಗೂ ತಾಲೂಕು ನ್ಯಾಯಾಲಯದಲ್ಲಿ ನಡೆಯಲಿದೆ. ರಾಜಿ ಮಾಡಿಕೊಳ್ಳಬಹುದಾದ ಮೋಟಾರು ವಾಹನ ಕಾಯ್ದೆ, ಚೆಕ್ ಬೌನ್ಸ್, ಅಕ್ರಮ ಮರಳು ಮಾರಾಟ- ಸಾಗಾಟ, ಕಾರ್ಮಿಕ ನಷ್ಟ ಪರಿಹಾರ, ವಿದ್ಯುತ್, ನೀರಿನ ಶುಲ್ಕು ವಿವಾದ, ವೇತನ ಭತ್ತೆ, ಪಿಂಚಣಿ ವಿವಾದ ಮೊದಲಾದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬಸವರಾಜ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಉಪಸ್ಥಿತರಿದ್ದರು.
ಆ.21ರಿಂದ 23ರವರೆಗೆ ‘ಸಮಾಧಾನ ಸಮಾರೋಹ್ 2026’ ಎಂಬ ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದೆ. ವಿಶೇಷ ಅದಾಲತ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಜಿಲ್ಲೆಗೆ ಸಂಬಂಧಿಸಿ 43 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಲಿದೆ. ಅಗತ್ಯ ಬಿದ್ದರೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ವಿಶೇಷ ಲೋಕ ಅದಾಲತ್‌ನ ಸಂಪರ್ಕ ಸಾಧಿಸಿ ಪ್ರಕರಣ ಇತ್ಯರ್ಥ ಪಡಿಸಲಾಗುವುದು. ಪಕ್ಷಕಾರರು ಸುಪ್ರೀಂ ಕೋರ್ಟ್ ನಲ್ಲಿರುವ ತಮ್ಮ ಪ್ರಕರಣಗಳ ರಾಜಿ ಬಗ್ಗೆ ಯಾವುದೇ ಅನುಮಾನ ಇದ್ದರೆ ಸ್ಥಳೀಯ ತಾಲೂಕು ಕಾನೂನು ಸೇವಾ ಸಮಿತಿ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಬಸವರಾಜ ಹೇಳಿದರು.