ಹರಿಹರ: ಬ್ರಿಟಿಷರ ದುರಾಡಳಿತ ಹಾಗೂ ರಾಷ್ಟ್ರೀಯತೆಗೆ ಧಕ್ಕೆ ತರುವ ಧೋರಣೆಗಳೇ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತು ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಎಂ. ರಾಜಕುಮಾರ್ ಹೇಳಿದರು.
ಕಾಲೇಜಿನಲ್ಲಿ ಮಂಗಳವಾರ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದಿಂದ ಆಯೋಜಿಸಿದ್ದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ದತ್ತು ಮಕ್ಕಳಿಗೆ ಹಕ್ಕು ನಿರಾಕರಣೆ, ಬಿರುದುಗಳ ರದ್ಧತಿ, ಸಹಾಯಕ ಸೈನ್ಯ ಪದ್ಧತಿ ಜಾರಿ, ಬ್ರಿಟಿಷರಿಗೆ ಉನ್ನತ ಹುದ್ದೆ, ಭಾರತೀಯರಿಗೆ ಕನಿಷ್ಟ ಹುದ್ದೆ, ಅಲ್ಪ ವೇತನ, ಭ್ರಷ್ಟಾಚಾರ, ಕಚ್ಚಾ ಸಾಮಗ್ರಿಗಳ ಲೂಟಿ, ಕ್ಷಾಮ ನಿರ್ವಹಣೆಯ ವೈಫಲ್ಯ ಭಾರತೀಯನ್ನು ಹೋರಾಟಕ್ಕೆ ಪ್ರೇರೇಪಿಸಿತು ಎಂದರು.
ಹಿಂದು ಧರ್ಮದ ಆಚರಣೆಗಳ ಮೇಲೆ ನಿರಂತರ ನಿರ್ಬಂಧ, ಧಾರ್ವಿುಕ ಭಾವನೆಗಳಿಗೆ ಧಕ್ಕೆ, ಮತಾಂತರದ ದುರ್ನೀತಿಗಳ ವಿರುದ್ಧ ಬ್ರಿಟಿಷರ ವಿರುದ್ಧ ಭಾರತೀಯರು ಹೋರಾಟಕ್ಕೆ ಮುಂದಾದರು ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಂ.ಎನ್. ರಮೇಶ್ ಮಾತನಾಡಿ, ಯುವ ಜನತೆ ಸದಭಿರುಚಿಯ ಮನೋಭಾವದೊಂದಿಗೆ ದೇಶಾಭಿಮಾನ, ಪ್ರಾದೇಶಿಕತೆ ಬೆಳೆಸಿಕೊಳ್ಳಬೇಕು ಎಂದರು.
ಐಕ್ಯೂಎಸ್ಸಿ ಸಂಯೋಜಕ ಡಾ.ಎಚ್.ಪಿ. ಅನಂತನಾಗ್, ಇತಿಹಾಸ ವಿಭಾಗದ ಅಧ್ಯಾಪಕ ಮಲ್ಲಿಕಾರ್ಜುನ್ ಜವಳಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಎ. ಬಾಬು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ. ಮನೋಹರ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಕೆ.ಜೆ. ಯೋಗೇಶ್, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.