ಮಂಡ್ಯ: ಇತ್ತೀಚಿನ ದಿನದಲ್ಲಿ ಬದಲಾದ ಆಹಾರ ಪದ್ಧತಿಯಿಂದಾಗಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಋತುಚಕ್ರ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಆರ್.ಮನೋಹರ್ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು, ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ಗರ್ಭಕೋಶದಲ್ಲಿ ನೀರುಗುಳ್ಳೆಗಳು ಹೆಚ್ಚಾಗುತ್ತಿವೆ. ಪರಿಣಾಮ ಸರಿಯಾದ ಸಮಯಕ್ಕೆ ಋತುಚಕ್ರವಾಗದೆ ಬಳಲುತ್ತಿದ್ದಾರೆ ಎಂದು ಎಚ್ಚರಿಸಿದರು.
ಸಮರ್ಪಕ ಪೌಷ್ಟಿಕಾಹಾರ ಸೇವನೆಯಿಂದ ದೂರವಿದ್ದು, ಫಾಸ್ಟ್ ಮತ್ತು ಜಂಕ್‌ಫುಡ್, ಕೋಬಿನಾಂಶ ಹೆಚ್ಚಿರುವ ಕರಿದ ಪದಾರ್ಥಗಳ ಸೇವನೆ ಹೆಚ್ಚಾಗಿದೆ. ಇದರಿಂದ ಮಹಿಳೆಯರಲ್ಲಿ ಮತ್ತು ಋತುಮತಿಯಾದ ಹದಿಹರೆಯದ ಶಾಲಾ ಕಾಲೇಜಿನ ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಸ್ಯೆ, ಸಕ್ಕರೆಕಾಯಿಲೆ, ಸ್ಥೂಲಕಾಯ ದೇಹ, ಕ್ಯಾನ್ಸರ್ ಲಕ್ಷಣಗಳು ಕಂಡುಬರುತ್ತಿವೆ. ಇಂತಹ ಸಮಸ್ಯೆ ಎದುರಾದಾಗ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಸರಿಪರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಮತ್ತು ಅರಿವು ಹೆಚ್ಚಿಸಲು ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘವು ತಂಡೋಪಾದಿಯಾಗಿ ವಿವಿಧ ತಾಲೂಕುಗಳಲ್ಲಿ ಕಾರ್ಯ ಸಲ್ಲಿಸುತ್ತಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಅರಿವು ಹೆಚ್ಚಿಸಲಾಗುತ್ತಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಚಂಪಕಮಾಲಿನಿ ಮಾತನಾಡಿ, ಹಿಂದೆ ಮಹಿಳೆಯರು ಮುಟ್ಟಾದ ದಿನಗಳಲ್ಲಿ ಉತ್ತಮ ಗುಣಮಟ್ಟದ ಬಟ್ಟೆ ಬಳಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಪ್ಲಾಸ್ಟಿಕ್ ಅಂಶವಿರುವ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಮಾಡುತ್ತಿರುವುದರಿಂದ ರೋಗಗಳು ಬರುತ್ತಿವೆ. ಪ್ಲಾಸ್ಟಿಕ್ ಪ್ಯಾಡ್‌ಗಳನ್ನು ಬಳಸುವುದು ಅಪಾಯಕಾರಿ. ಆದ್ದರಿಂದ ಮುಟ್ಟಿನ ಕಪ್‌ಗಳ ಬಳಕೆ ಉತ್ತಮವಾಗಿದೆ. ಬಳಸಿದ ನಂತರ ಸ್ವಚ್ಚೆ ಮಾಡಿ, ಮರುಬಳಕೆ ಮಾಡಬಹುದು. ಇದರಿಂದ ಹಣ ಉಳಿಯುತ್ತದೆ. ಮಾತ್ರವಲ್ಲದೆ ಆರೋಗ್ಯ ಸುಧಾರಿಸುತ್ತದೆ ಎಂದು ಸಲಹೆ ನೀಡಿದರು.
ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಶಿಲ್ಪಶ್ರೀ ಅವರು ಪ್ರಾತ್ಯಕ್ಷಿಕೆ ಮೂಲಕ ಹದಿಹರೆಯದ ಹಾಗೂ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ನೀಲಕಂಠ, ಉಪಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ್, ಮಹಿಳಾ ಆಂತರಿಕ ದೂರು ಹಾಗೂ ಲೈಂಗಿಕ ಕಿರುಕುಳ ಸಮಿತಿ ಸಂಯೋಜಕಿ ಮಹಾಲಕ್ಷ್ಮೀ, ಪ್ರೊ.ನರಸಿಂಹನ್, ಪ್ರೊ.ಡೇವಿಡ್, ಡಾ.ಪರಮೇಶ್ವರಿ, ಡಾ.ಅಮೃತವರ್ಷಿಣಿ, ಪ್ರೊ.ಭವ್ಯಾ, ಕವಿತಾ, ಪ್ರೊ.ಪಾರ್ವತಿ ಇತರರಿದ್ದರು.