ವಿಜಯವಾಣಿ ಸುದ್ದಿಜಾಲ ಉಡುಪಿ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ ಎಂಬ ಎಂಟು ಅಂಗಗಳ ಸಹಾಯದಿಂದ ಕೈಗೊಳ್ಳುವುದೇ ಯೋಗಾಸನವಾಗಿದೆ. ಯೋಗವೆಂದರೆ ಕೇವಲ ಆಸನವಷ್ಟೇ ಅಲ್ಲ. ಅದು ಮೋಕ್ಷ ಪಡೆಯುವ ಕ್ರಮ. ಅದೊಂದು ಅಷ್ಟಾಂಗ ಶಾಸ್ತ್ರವಾಗಿದೆ ಎಂದು ಎಸ್ಎಂಎಸ್ಪಿ ಪಾಠಶಾಲೆಯ ಅಲಂಕಾರ ವಿಭಾಗದ ಅಧ್ಯಕ್ಷ ಡಾ.ಅಮೃತೇಶ ಆಚಾರ್ಯ ಡಿ.ಎಸ್. ತಿಳಿಸಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂಸ್ಕೃತ ವಿಭಾಗ ಮತ್ತು ಪ್ರಜ್ಞಾ ಮಂಥನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಯೋಗಶಾಸ್ತ್ರಮ್ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಚಿತ್ತ ಎಂದರೆ ಮನಸ್ಸು ಎಂದರ್ಥ. ಬುದ್ಧಿ, ಅಹಂಕಾರದ ಸಮೀಕರಣಕ್ಕಾಗಿ ಯೋಗವೂ ಅವಶ್ಯಕವಾದ ಅಂಗವಾಗಿದೆ. ಯೋಗವೆಂದರೆ ಚಿತ್ತವೃತ್ತಿಯಾಗಿದೆ. ಯೋಗವನ್ನು ಅಳವಡಿಸಿಕೊಂಡರೆ ಎಷ್ಟೋ ಬಗೆಯ ಕಾಯಿಲೆಗಳು ಸಮೀಪವೂ ಸುಳಿಯದು. ಅದನ್ನು ಮಾತಿನಲ್ಲಿ ಹೇಳಿದರೆ ಅರ್ಥವಾಗದು. ಅದರ ಗುಣ, ಉಪಯೋಗ ಏನೆಂಬುದನ್ನು ನಿತ್ಯ ಯೋಗಾಸನ ಮಾಡುವುದರಿಂದ ಮಾತ್ರ ತಿಳಿಯುತ್ತದೆ ಎಂದರು.
ಐಕ್ಯುಎಸಿ ಸಂಚಾಲಕ ಡಾ. ವಿನಯಕುಮಾರ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಅಧ್ಯಕ್ಷ ಡಾ.ರಮೇಶ ಟಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಉಪನ್ಯಾಸಕ ಡಾ. ಆನಂದ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ರಾಜರಾಜೇಶ್ವರಿ ಹಾಗೂ ಶ್ರೀಪೂರ್ಣಾ ಕಾರ್ಯಕ್ರಮ ನಿರ್ವಹಿಸಿದರು.