ವಿಜಯವಾಣಿ ಸುದ್ದಿಜಾಲ ಉಡುಪಿ
ಐತಿಹಾಸಿಕವಾಗಿ ದೇವದಾಸಿಯರು ಮತ್ತು ತವೈಫ್ಗಳು ಭಾರತದಲ್ಲಿ ಸಂಗೀತ, ನೃತ್ಯ ಮತ್ತು ಕಲೆಗಳ ವಿಕಾಸಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ, ಅವರನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಬನಾರಸ್ ಹಿಂದು ವಿಶ್ವವಿದ್ಯಾಲಯ (ಬಿಎಚ್ಯು)ದ ಹಿರಿಯ ಕಲಾ ಇತಿಹಾಸಗಾರ್ತಿ ಡಾ. ಬಿಂದಾ ಪರಾಂಜಪೆ ಅಭಿಪ್ರಾಯಪಟ್ಟರು.
ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವದಾಸಿಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಾಸ್ತವವಾಗಿ ದೇವದಾಸಿಯರು ಮತ್ತು ತವೈಫ್ಗಳು ಸಂಗೀತ ಮತ್ತು ನೃತ್ಯವನ್ನು ಉತ್ತಮಗೊಳಿಸಿದ್ದು, ಅದು ಇಂದು ಶಾಸ್ತ್ರೀಯ ಸ್ಥಾನ-ಮಾನ ಗಳಿಸಿದೆ. ಶಿಷ್ಟಾಚಾರ ಕಲಿಯಲು ಮತ್ತು ಕಂಡುಕೊಳ್ಳಲು ಚಿಕ್ಕ ಮಕ್ಕಳನ್ನು ಅವರ ಬಳಿಗೇ ಕಳುಹಿಸುವ ಕಾಲವಿತ್ತು. ಆ ದಿನಗಳಲ್ಲಿ ಅವರು ಗೌರವ ಮತ್ತು ಸ್ವಾಭಿಮಾನ ಅನುಭವಿಸಿದರು. ನಂತರ ಬ್ರಿಟಿಷರು ಅದನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಂಡರು. ನಂತರದ ವರ್ಷಗಳಲ್ಲಿ ಅವರ ವೃತ್ತಿಯನ್ನು ಅಪಮೌಲ್ಯ ಗೊಳಿಸಿರುವುದು ದುರದೃಷ್ಟಕರ ಎಂದರು.
ಈ ಸಂಪ್ರದಾಯದ ಅನೇಕ ಪ್ರಮುಖರ ಹೆಸರುಗಳನ್ನು ಉಲ್ಲೇಖಿಸಿ, ಸಂಗೀತ ಮತ್ತು ಕಲೆಗೆ ಅವರ ಕೊಡುಗೆ ಏನೆಂಬುದನ್ನು ವಿವರಿಸಿದರು. ಆದರೆ, ಇಂದಿಗೂ ಸಮಾಜವು ಅವರ ವಿರುದ್ಧ ತಾರತಮ್ಯದ ಭಾವನೆ ಹೊಂದಿರುವುದು ವಿಷಾದದ ಸಂಗತಿ. ದೇವದಾಸಿಯರು ಮತ್ತು ತವೈಫ್ಗಳು ನಮ್ಮ ಸಂಯೋಜಿತ ಸಂಸ್ಕೃತಿಯ ಭಾಗವೇ ಆಗಿದ್ದಾರೆ ಎಂದು ಹೇಳಿದರು.
ಜಿಸಿಪಿಎಎಸ್ ಮುಖ್ಯಸ್ಥ ಡಾ.ವರದೇಶ್ ಹಿರೇಗಂಗೆ ಸಂವಾದ ನಡೆಸಿಕೊಟ್ಟರು. ಡಾ ಭ್ರಮರಿ ಶಿವಪ್ರಕಾಶ್ ವಂದಿಸಿದರು.