ಮಂಡ್ಯ: ಮಹಿಳೆಯರು ಸಾಧನೆ ಮಾಡುವ ಸಮಯದಲ್ಲಿ ಎದುರಾಗುವ ಅಪಪ್ರಚಾರದ ಮಾತುಗಳಿಗೆ ಎದೆಗುಂದದೆ ಮುನ್ನಡೆಯಬೇಕು ಎಂದು ಸಂಶೋಧಕಿ ಡಾ.ಶ್ವೇತಾ ಮಡಪ್ಪಾಡಿ ಕಿವಿಮಾತು ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಇನ್ನರ್‌ವ್ಹೀಲ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಹೆಣ್ಣು ಸಮಾಜದಲ್ಲಿ ಒಳ್ಳೆಯ ಮಾರ್ಗದ ಕಡೆಗೆ ನಡೆಯುವಾಗ ಅಡ್ಡಿಯಾಗುವಂತಹ ಕಲ್ಲು, ಮುಳ್ಳಿನಂತಹ ಅಪಪ್ರಚಾರಕ್ಕೆ ಕಿವಿಗೊಡುವುದು ಬೇಡ ಎಂದರು.
ಸಮಾಜದಲ್ಲಿ ಪ್ರಸ್ತುತ ಹೆಣ್ಣಿನ ಆದ್ಯತೆ ಹಾಗೂ ಪ್ರಾಮುಖ್ಯತೆ ಬಗ್ಗೆ ಎಚ್ಚರಿಸಬೇಕಾದ ಅವಶ್ಯಕತೆಯಿದೆ. ಕೆಲ ವರ್ಷದ ಹಿಂದೆ ಹೆಣ್ಣು ಮಕ್ಕಳು ಪಿಯುಸಿ ಹಾಗೂ ಪದವಿ ವ್ಯಾಸಂಗ ಮಾಡುವುದೇ ಸವಾಲಿನಂತಾಗಿತ್ತು. ಅಂತಹ ಬೆಳವಣಿಗೆ ದುರಂತ ಎಂದರೂ ತಪ್ಪಾಗಲಾದರು. ಆದರೆ ಪ್ರಸ್ತುತ ಹಾಗೂ ಮುಂದಿನ ದಿನದಲ್ಲಿ ಅಂತಹ ಪರಿಸ್ಥಿತಿ ಇರುವುದಿಲ್ಲ. ಪ್ರತಿ ಹೆಣ್ಣಿಗೂ ವಿಶೇಷ ಜವಾಬ್ದಾರಿ ಇದೆ. ಅದೆಂದರೆ ನಿಮ್ಮ ಯಶಸ್ಸುಗಳ ಜತೆಗೆ ಪಕ್ಕದಲ್ಲಿರುವ ಸ್ನೇಹಿತೆಯನ್ನು ಗಟ್ಟಿಗೊಳಿಸಿ ಸಾಧನೆ ಮಾಡಲು ಪ್ರೇರೆಪಿಸಬೇಕು. ಇದರಿಂದ ಅವರು ಕೂಡ ಮುಂದೊಂದು ದಿನ ಗುರಿ ಮುಟ್ಟುವುದರ ಜತೆಗೆ ಯಾವುದೇ ರೀತಿಯ ಸೋಲನ್ನು ಒಪ್ಪಿಕೊಳ್ಳದೇ ಮುನ್ನುಗ್ಗುತ್ತಾರೆ. ಮಾತ್ರವಲ್ಲದೆ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಣೆ ಮಾಡುತ್ತಾರೆ. ಹೆಣ್ಣು ಮಕ್ಕಳು ಮಾನಸಿಕವಾಗಿ ಶಕ್ತರಾಗಲು ತಮ್ಮ ಮನೋಸ್ಥೈರ್ಯವನ್ನು ಧೃಡಪಡಿಸಿಕೊಳ್ಳಬೇಕು. ಆಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಆರ್.ದಶರಥ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಡಾ.ಕೆಂಪಮ್ಮ, ಡಾ.ಎಚ್.ಎಸ್.ಶಿವರಾಜು ಇತರರಿದ್ದರು.