ಗುಡದೂರು ಕೆರೆ ಬಸವೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ರೈತಜಾತ್ರೆ ಲಾಂಛನವನ್ನು ಶಿವಕುಮಾರ ಹಿರೇಮಠ ಬಿಡುಗಡೆ ಮಾಡಿದರು. ಪ್ರಮುಖರಾದ ತಿರುಪತಿ ಮಾಲಿಪಾಟೀಲ, ಅಮರೇಗೌಡ ಪೊಲೀಸ್ ಪಾಟೀಲ, ಬಸವರಾಜ ದೇಸಾಯಿ, ಬಸವರಾಜ ದಡ್ಡಿಹಾಳ, ಚನ್ನಬಸವ ದೇಸಾಯಿ ಇದ್ದರು. 
ಜಿಲ್ಲೆ

ವಿಶೇಷ ಜ್ಞಾನ ಹಂಚಲು ವಿವಿಧ ಚಟುವಟಿಕೆ

ರುದ್ರಪ್ಪ ವಾಲಿ

ಮಸ್ಕಿ: ತಾಲೂಕಿನ ಗುಡದೂರು ಗ್ರಾಮದ ಕೆರೆ ಬಸವೇಶ್ವರ ಜಾತ್ರೆ ಆ.11ರಂದು ನಡೆಯಲಿದ್ದು, ಕೃಷಿ ಇಲಾಖೆ ಸಿಂಧನೂರು ಮತ್ತು ತ್ರಿಕಾಲ ಸೇವಾ ಟ್ರಸ್ಟ್ ಸಹಯೋಗದಲ್ಲಿ ರೈತಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶಿವಕುಮಾರ ಹಿರೇಮಠ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಕೃಷಿ ಜಾತ್ರೆಯ ಲಾಂಛನ ಬಿಡುಗಡೆಗೊಳಿಸಿ, ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಕಡೆಗಣನೆ ನಡೆಯುತ್ತಿದ್ದು, ಅವರ ಮಹತ್ವ ಅರಿಯಲು ಮತ್ತು ರೈತರಿಗೆ ಕೃಷಿಯಲ್ಲಿ ವಿಶೇಷ ಜ್ಞಾನ ಹಂಚಲು ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಆ.7ರಂದು ಜೊಡೆತ್ತುಗಳ ಮೆರವಣಿಗೆ ನಡೆಯಲಿದೆ. ಕೃಷಿ ಉಪಕರಣ, ಬೀಜ ಮತ್ತು ಗೊಬ್ಬರ ಪ್ರದರ್ಶನ, ಕೃಷಿ ತಜ್ಞರಿಂದ ಮಾಹಿತಿ ಕಾರ್ಯಾಗಾರ, ಮಹಿಳಾ ಸ್ವಸಹಾಯ ಸಂಘಗಳಿಂದ ಕೌಶಲ ಅಭಿವೃದ್ಧಿ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ಮಾಹಿತಿ ಪ್ರದರ್ಶನ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.

ಆ.8ರಂದು ರಕ್ತದಾನ ಶಿಬಿರ, ಆ.10ರಂದು ರೈತ ಸಿದ್ದಪ್ಪ ಬಿದರಿ ಅವರ ಸ್ವರಚಿತ ಕವನಗಳ ಹಾಡುಗಾರಿಕೆ ನಡೆಯಲಿದೆ. ಯದ್ದಲದೊಡ್ಡಿಯ ಶ್ರೀಮಹಾಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಕೃಷಿ ತಜ್ಞರಾದ ಡಾ.ಬಸವಣ್ಣೆಪ್ಪ , ಡಾ.ವಾಣಿಶ್ರೀ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಇತರರು ಭಾಗವಹಿಸಲಿದ್ದಾರೆ ಎಂದರು.