ರಬಕವಿ/ಬನಹಟ್ಟಿ: ಈ ಭಾಗದ ಜನತೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಿಶೇಷ ಸೌಲಭ್ಯಗಳನ್ನು ಒದಗಿಸುವಲ್ಲಿ ಬದ್ಧನಾಗಿದ್ದು, ಕಳೆದ ವರ್ಷದಂತೆ ಪ್ರಸಕ್ತ 400 ಹೊಸ ಬಸ್‌ಗಳನ್ನು ಒದಗಿಸಲಾಗುವದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಶನಿವಾರ ಮಧ್ಯಾಹ್ನ ರಬಕವಿ ಹಾಗು ಬನಹಟ್ಟಿ ನೂತನ ಬಸ್ ನಿಲ್ದಾಣಗಳ ಕಟ್ಟಡಗಳನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಅರಿವಿದೆ. ಗ್ರಾಮೀಣ ಪ್ರದೇಶಗಳಿಗೆ ವಿಶೇಷ ಬಸ್ ವ್ಯವಸ್ಥೆ ನೀಡಲಾಗುವದೆಂದರು. ಕೋವಿಡ್ ಸಂದರ್ಭ ರಾಜ್ಯಾದ್ಯಂತ 3 ಸಾವಿರ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಹಂತ-ಹಂತವಾಗಿ ಹೆಚ್ಚಿಸಲಾಗುತ್ತಿದ್ದು, ಜನಸಾಮಾನ್ಯರ ಪ್ರೀತಿಗೆ ಸಾರಿಗೆ ಸಂಸ್ಥೆ ಪಾತ್ರವಾಗಿರುವದಕ್ಕೆ ಧನ್ಯವಾದ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಜಮಖಂಡಿ-ಮುಧೋಳ ಸಾರಿಗೆ ಘಟಕಗಳಿಂದ ರಾಜ್ಯದಲ್ಲಿಯೇ ಆದಾಯದಲ್ಲಿ ಪ್ರಥಮವಾಗಿವೆ. ಶಕ್ತಿ ಯೋಜನೆಯಿಂದ ರಾಜ್ಯ ಸಾರಿಗೆಗೆ ಸರ್ಕಾರದಿಂದ 264.64 ಕೋಟಿ ರೂ.ಗಳಷ್ಟು ಆದಾಯ ಹೆಚ್ಚಿಸಲು ಕಾರಣವಾಗಿರುವದು ವಿಶೇಷ. ಈ ಭಾಗದಿಂದ ಬೆಂಗಳೂರು, ಮಂಗಳೂರು ಪ್ರದೇಶಗಳಿಗೆ ತೆರಳಲು ಖಾಸಗಿ ಕಂಪನಿಯವರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ಸಚಿವರಲ್ಲಿ ಒತ್ತಾಯಿಸಿದರು.
ವಾಯುವ್ಯ ಸಾರಿಗೆ ಅಧ್ಯಕ್ಷ ಭರಮಗೌಡ ಕಾಗೆ ಮಾತನಾಡಿ, ರಾಜ್ಯದಲ್ಲಿ ಸಾರಿಗೆ ಕ್ರಾಂತಿಯಾಗಿದೆ. ರಾಜ್ಯದ ಹಲವಾರು ತೀರ್ಥ ಕ್ಷೇತ್ರಗಳಿಗೆ ಈ ಭಾಗದಿಂದ ಬಸ್‌ಗಳ ವ್ಯವಸ್ಥೆಮಾಡಲಾಗುವದು ಅಲ್ಲದೆ ಸಾರ್ವಜನಿಕ ಬಸ್ ನಿಲ್ದಾಣದ ವಲಯಗಳನ್ನು ಸ್ವಚ್ಛತೆ ಹಾಗು ಶಿಸ್ತಿನಿಂದ ಕಾಯಬೇಕೆಂದು ಮನವಿ ಮಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳಿಗೆ 3 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಇನ್ನೂ ತಡೆಗೋಡೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಕಾರ್ಯಗಳಿಗೆ 1.5 ಕೋಟಿ ರೂ.ಗಳಷ್ಟು ಹಣ ಬಿಡುಗಡೆಗೊಳಿಸಬೇಕೆಂದರು. ಬೆಂಗಳೂರು, ಮಂಗಳೂರು, ಹೈದ್ರಾಬಾದ್ ಸೇರಿದಂತೆ ಅನೇಕ ಕಡೆಗಳಿಗೆ ತೆರಳಲು ಸಾರಿಗೆಯಿಂದ ಒಂದೂ ಬಸ್ ವ್ಯವಸ್ಥೆಯಲ್ಲಿ ಹವಾ ನಿಯಂತ್ರಿತ ಸೇರಿದಂತೆ ಎಲ್ಲ ಭಾಗಗಳಿಗೆ ತಲಾ ಮೂರ‌್ನಾಲ್ಕು ಬಸ್‌ಗಳ ಅವಶ್ಯವಿದೆಯೆಂದರು.
ಈಗಾಗಲೇ ಕಲ್ಯಾಣ ಕರ್ನಾಟಕ, ಬಯಲು ಸೀಮೆ ಪ್ರದೇಶಗಳಂತೆ ಕಿತ್ತೂರ ಕರ್ನಾಟಕ ಭಾಗವನ್ನೂ ಅಭಿವದ್ಧಿಪಡಿಸುವಲ್ಲಿ ವಿಶೇಷ ಅನುದಾನ ಒದಗಿಸಬೇಕು. ಗ್ರಾಮೀಣ ಭಾಗದಲ್ಲಿನ ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕೆಂದರು.
ಅನುದಾನ ಒದಗಿಸಿ: ಮುಜರಾಯಿ ಇಲಾಖೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿನ ದೇವಾಲಯಗಳಿಗೆ ಅನುದಾನ ಒದಗಿಸುವಲ್ಲಿ ತಾರತಮ್ಯವಾಗುತ್ತಿದೆ. ಹಲವಾರು ಕಡೆಗಳಲ್ಲಿ ಒದಗಿಸುವ ವ್ಯವಸ್ಥೆಯಂತೆಯೇ ಈ ಭಾಗದ ದೇವಾಲಯ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಶಾಸಕ ಸಿದ್ದು ಸವದಿ ಸಚಿವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪೀರಸಾಬ ಕೌತಾಳ, ನಗಸಭೆ ಅದ್ಯಕ್ಷೆ ವಿದ್ಯಾ ದಭಾಡಿ, ಉಪಾಧ್ಯಕ್ಷ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಚೇರಮನ್ ಅರುಣ ಬುದ್ನಿ, ಶೋಭಾ ಕೊಕ್ಕನವರ, ಗೌರಿ ಮಿಳ್ಳಿ, ಮಹಾಲಿಂಗಪೂರ ಪುರಸಭಾಧ್ಯಕ್ಷ ಯಲ್ಲನಗೌಡ ಪಾಟೀಲ, ಸಿದ್ದು ಕೊಣ್ಣೂರ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಯಲ್ಲಪ್ಪ ಕಟಗಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ ಸೇರಿದಂತೆ ಅನೇಕರಿದ್ದರು.