ನಾಗಮಂಗಲ: ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರಿಗೆ ಮುಂದಿನ ದಿನಗಳಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯಾಗಬೇಕಿದ್ದು ಆಗ ಮಾತ್ರ ಕನ್ನಡ ಮತ್ತಷ್ಟು ಸದೃಢವಾಗುವ ಜತೆಗೆ ಅನ್ಯರಾಜ್ಯಗಳಲ್ಲಿಯೂ ಹೆಚ್ಚಿನ ಮಟ್ಟದಲ್ಲಿ ಕನ್ನಡ ಪಸರಿಸಲಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಸಂಘದ ವತಿಯಿಂದ 7 ದಿನಗಳ ಕಾಲ ಆಯೋಜಿಸಿರುವ ನಾಗರಂಗ ರಾಜ್ಯಮಟ್ಟದ ನಾಟಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ನುಡಿಗೌರವ ಸ್ವೀಕರಿಸಿ ಮಾತನಾಡಿದರು. ಅನ್ಯ ಭಾಷೆಗಳ ವ್ಯಾಮೋಹದ ನಡುವೆಯೂ ಕನ್ನಡ ಭಾಷೆ ಉಳಿದಿದೆ ಎಂದರೆ ಅದು ಕೇವಲ ಗ್ರಾಮೀಣ ಭಾಗದ ಜನರಿಂದ ಮಾತ್ರವಾಗಿದೆ ಎಂದರು.
ಕನ್ನಡ ಕೆಲವು ವರ್ಷಗಳಲ್ಲಿ ನಾಶವಾಗುವ ಭಾಷೆ ಎಂಬ ಅಪವಾದವಿದೆ. ಆದರೆ ಈ ಕನ್ನಡ ಪರ ಹಬ್ಬವನ್ನು ನೋಡಿದರೆ ಕನ್ನಡಕ್ಕೆ ಉಜ್ವಲ ಭವಿಷ್ಯವಿದೆ. ಸೂರ್ಯ ಚಂದ್ರರಿರುವವರೆಗೂ ಕನ್ನಡ ಭಾಷೆ ಇರುತ್ತದೆ. ಕೇಂದ್ರ ಸರ್ಕಾರವು ಹಿಂದಿಯನ್ನು ಎಲ್ಲರ ತಲೆಯ ಮೇಲೆ ಕೂರಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ನಾವೆಲ್ಲರೂ ನಮ್ಮ ಭಾಷೆಯಲ್ಲೇ ಮಾತನಾಡಬೇಕು, ಅಳಬೇಕು, ನಗಬೇಕು ಮತ್ತು ಸಂಭ್ರಮಿಸಬೇಕು. ಕನ್ನಡ ಭಾಷೆಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದರು.
ಕನ್ನಡ ಭಾಷೆಯಲ್ಲಿ 52 ಸಂಬಂಧ ವಾಚಕಗಳಿವೆ, ಆದರೆ ಇಂಗ್ಲಿಷ್‌ನಲ್ಲಿ ಕೇವಲ ಎರಡಿವೆ. ಕನ್ನಡ ಭಾಷೆಯು ಸಂಬಂಧ, ಬಾಂಧವ್ಯಗಳನ್ನು ಬೆಸೆಯುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು. ಎಂದಿಗೂ ಕನ್ನಡ ಭಾಷೆಗೆ ದ್ರೋಹ ಬಗೆಯಬಾರದು. ಸಿದ್ದರಾಮಯ್ಯ ಅವರು ಎಲ್ಲ ಗ್ಯಾರಂಟಿಗಳಿಗಿಂತ ಕನ್ನಡ ಭಾಷೆ ಗ್ಯಾರಂಟಿ ನೀಡಬೇಕು. ನಾವು ಕನ್ನಡ ಪುಸ್ತಕಗಳನ್ನು ಖರೀದಿಸಿ, ಕನ್ನಡ ಪುಸ್ತಕಗಳನ್ನು ಓದಬೇಕು. ಸರ್ಕಾರವು ಸಹ ಕನ್ನಡ ಲೇಖಕರ ಕೃತಿಗಳನ್ನು ಖರೀದಿಸಿ ಪ್ರಕಟಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಕನ್ನಡ ಭಾಷೆಗೆ ಅನ್ನಕೊಡುವ ಶಕ್ತಿಯಿಲ್ಲ ಎಂಬ ಮಾತಿದೆ. ಅದು ನಿಜವಾಗಿಯೂ ತಪ್ಪು. ನೀವು ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಸೇರಿಸುವ ಕೆಲಸ ಮಾಡಿ. ನಾನು ಕೂಡ ನನ್ನ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಿದ್ದೇನೆ. ಕನ್ನಡ ಭಾಷೆ ಕಲಿತರೆ ಅದು ಎಲ್ಲ ಭಾಷೆಯನ್ನು ಕಲಿಸುತ್ತದೆ. ಸುಮಾರು 52 ವರ್ಷದ ಇತಿಹಾಸ ಇರುವ ನಾಗಮಂಗಲದ ಕನ್ನಡ ಸಂಘಕ್ಕೆ ಸರ್ಕಾರವು ಒಂದು ಕಟ್ಟಡ ಮಂಜೂರು ಮಾಡದಿರುವುದು ದುರ್ದೈವ. ಕನ್ನಡ ಸಂಘವು ಕನ್ನಡ ಹಬ್ಬದ ವಾತಾವರಣವನ್ನು ತಾಲೂಕಿನಲ್ಲಿ ಸೃಷ್ಟಿ ಮಾಡಿದೆ. ತಾಲೂಕಿನ ಜನರು ಇಷ್ಟು ಸಂತೋಷದಿಂದ ಕನ್ನಡ ಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ವೇದಿಕೆಯಲ್ಲಿ ರಂಗಗೌರವ ಸ್ವೀಕರಿಸಿ ಮಾತನಾಡಿದ ಹಿರಿಯನಟ ದೊಡ್ಡಣ್ಣ, ಕರ್ನಾಟಕದಲ್ಲಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಅದುವೇ ಹೃದಯವಂತರಿರುವ ಮಂಡ್ಯವಾಗಿದೆ. ಬರೆದಂತೆ ಮಾತನಾಡಲು, ಮಾತನಾಡಿದರೆ ಯಥಾವತ್ತಾಗಿ ಬರೆಯಲು ಸಾಧ್ಯವಾಗುವ ಭಾಷೆ ಯಾವುದಾದರೂ ಇದ್ದರೆ ಅದು ನಮ್ಮ ಕನ್ನಡ ಭಾಷೆಯಾಗಿದೆ. ನಾನು ನನ್ನ ತಾಯಿ ಮಾಡಿದ ಪುಣ್ಯದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಇಲ್ಲಿರುವ ತಾಯಂದಿರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಮಕ್ಕಳಿಗೆ ಹೊಟ್ಟೆಪಾಡಿಗೆ ಯಾವುದಾದರೂ ಭಾಷೆ ಕಲಿಸಿ, ಆದರೆ ಪ್ರೀತಿ ಹಂಚಲು ನಮ್ಮ ಕನ್ನಡ ಭಾಷೆಯನ್ನು ಕಲಿಸಿ. ತಾಯಂದಿರು ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಕನ್ನಡದ ಪುಸ್ತಕಗಳನ್ನು ಕೊಟ್ಟು, ಕನ್ನಡವನ್ನು ಕಲಿಸುವ ಕೆಲಸವನ್ನು ಮಾಡಿ. ಜನ್ಮಕೊಟ್ಟ ತಾಯಿ ಮತ್ತು ಜನ್ಮ ನೀಡಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಕನ್ನಡ ಸಾಹಿತ್ಯಕ್ಕಿಂತಲೂ ಶ್ರೇಷ್ಠವಾದುದ್ದು ಈ ಜಗತ್ತಿನಲ್ಲಿ ಬೇರೆ ಯಾವುದು ಇಲ್ಲ ಎಂದರು.
ಕನ್ನಡ ಸಂಘದ ಅಧ್ಯಕ್ಷ ಕೆ.ಅಲಮೇಲ, ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ್, ಪದಾಧಿಕಾರಿಗಳಾದ ಎನ್.ಸಿ.ಶಿವಕುಮಾರ್, ಉಲ್ಲಾಸ್, ಮಧು, ನಟರಾಜು, ರಮಾನಂದ್ ಮತ್ತಿತರಿದ್ದರು.