ಚಿತ್ತಾಪುರದ ಬಸವ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಾದ ಮಕ್ಕಳನ್ನು ಶನಿವಾರ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಲಾಯಿತು. 
ಜಿಲ್ಲೆ

ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆ

ರಾಜು ಯಮಕನಮರಡಿ

ಚಿತ್ತಾಪುರ: ಪಟ್ಟಣದ ಬಸವನಗರ, ರಾಮಮಂದಿರ, ಆಸರ್ ಮೊಹಲ್ಲಾಗಳಲ್ಲಿ ವಿಶೇಷ ದಾಖಲಾತಿ ಆಂದೋಲನ ನಿಮಿತ್ತ ಶನಿವಾರ ಶಾಲೆಗೆ ದಾಖಲಾದ ಮಕ್ಕಳನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ನಡೆಸಿದ ಮೆರವಣಿಗೆ ಗಮನ ಸೆಳೆಯಿತು.

ಮಕ್ಕಳು ಮತ್ತು ಮುಖ್ಯ ಅತಿಥಿಗಳನ್ನು ಬಂಡಿಯಲ್ಲಿ ಕುಳ್ಳಿರಿಸಿ ಹಲಗೆ ಮತ್ತು ವಾದ್ಯಗಳೊಂದಿಗೆ ದಾಖಲಾತಿಗೆ ಸಂಬಂಧಿಸಿದ ಘೋಷಣೆಗಳ ಮೂಲಕ ನಡೆದ ವಿಶೇಷ ಆಂದೋಲನ ಸಾರ್ವಜನಿಕರ ಮೆಚ್ಚುಗೆ ಪಡೆಯಿತು. ಮಕ್ಕಳ ಪರ ಶಿಕ್ಷಕರ ಕಾಳಜಿಯನ್ನು ಕೊಂಡಾಡಲಾಯಿತು.

ಬಸವ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ದೇವಪ್ಪ ನಂದೂರಕರ್ ಮಾತನಾಡಿ, ಶೈಕ್ಷಣಿಕ ಪ್ರಗತಿಯಿಂದ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಮುಕ್ತಾರ್ ಪಟೇಲ್ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿದರು. ಶಿಕ್ಷಕಿ ಲಲಿತಾದೇವಿ ಸಜ್ಜನಶೆಟ್ಟಿ, ವಿಜಯಲಕ್ಷ್ಮೀ, ಅರ್ಚಕ, ಪ್ರಿಯಾಂಕಾ, ಎಲ್‌ಎಲ್‌ಎಫ್ ಸಂಸ್ಥೆಯ ಅರ್‌ಪಿಎ ಮಲ್ಲಮ್ಮ, ಎಸ್‌ಡಿಎಂಸಿ ಅಧ್ಯಕ್ಷೆ ಈರಮ್ಮ ಹಲಗಿ ಇತರರಿದ್ದರು.