ಬ್ಯಾಡಗಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇಳಿಮುಖವಾಗದಂತೆ ಶಿಕ್ಷಕರು ಜಾಗೃತರಾಗುವ ಮೂಲಕ ಕಡ್ಡಾಯವಾಗಿ ನಿಯಮಗಳನ್ನು ಇಲಾಖೆ ಪಾಲಿಸಿ ದಾಖಲಾತಿ ಹೆಚ್ಚಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಪಟ್ಟಣದ ಉನ್ನತೀಕರಿಸಿದ ಶಾಸಕರ ಮಾದರಿ ಪ್ರೌಢಶಾಲೆ (ಬಡಾವಣೆ) ಉದ್ಘಾಟನೆ ಹಾಗೂ ಪುಸ್ತಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣವು ಜ್ಞಾನ, ಕೌಶಲ, ತಂತ್ರ ಇನ್ನಿತರ ಮಾಹಿತಿ ಒದಗಿಸುವ ಮೂಲಕ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಪ್ರಗತಿ ನಿರ್ಣಾಯಕ ಪಾತ್ರ ವಹಿಸಲಿದೆ, ಶಿಕ್ಷಣದಿಂದ ಬಡತನ ನಿವಾರಣೆಯಾಗಲಿದ್ದು, ವಿದ್ಯಾವಂತ ವ್ಯಕ್ತಿ ತನ್ನ ಕುಟುಂಬವನ್ನು ಶಿಕ್ಷಣದಿಂದಲೇ ರಕ್ಷಿಸಿಕೊಳ್ಳುತ್ತಾನೆ. ಹೀಗಾಗಿ ನಾವೆಲ್ಲರೂ ಕಡ್ಡಾಯ ಶಿಕ್ಷಣವನ್ನು ಮುಕ್ತವಾಗಿ ಸ್ವಾಗತಿಸಬೇಕು. ಪಾಲಕರು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು ಎಂದರು.
ಎರಡು ಕೊಠಡಿ ಮಂಜೂರು: ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ 320 ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಈಗ ಪಿಎಂಶ್ರೀ ಶಾಲೆಯಾಗಿದ್ದು, ಇನ್ಮುಂದೆ ಕೆಪಿಎಸ್ ಶಾಲೆಯನ್ನಾಗಿ ಮಂಜೂರಾಗಲಿದೆ. ಮಕ್ಕಳಿಗೆ ಕೊಠಡಿ ಅಗತ್ಯವಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಲವು ಬಾರಿ ತಮ್ಮ ಗಮನಕ್ಕೆ ತಂದಿದ್ದು, 2 ಕೊಠಡಿ ಮಂಜೂರಾತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ನಾಲ್ಕು ದಶಕಗಳ ಹಿಂದೆ ನಾನು ಇಲ್ಲಿ ಶಿಕ್ಷಣ ಪಡೆದಿದ್ದು ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವೆ. ಈಗ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಿರುವ ಪ್ರಾಥಮಿಕ ಶಾಲೆಗೆ ಏನಾದರೂ ಋಣ ತೀರಿಸಬೇಕು. ನನ್ನ ಶಾಲೆಯ ಅಭಿವೃದ್ದಿಗೆ ಸಹಕಾರ ನೀಡುವ ಮೂಲಕ ಇಲ್ಲಿನ ಎಲ್ಲ ಬಡಮಕ್ಕಳಿಗೆ ಒಂದಿಲ್ಲೊಂದು ರೀತಿಯಲ್ಲಿ ನೆರವು ಒದಗಿಸಲು ಬದ್ದವಾಗಿರುವೆ. ಸರ್ಕಾರಿ ಶಾಲೆಯನ್ನು ಇನ್ನಷ್ಟು ಅಭಿವೃದ್ದಿಪಡಿಸಬೇಕೆಂಬ ಉದ್ದೇಶದಿಂದ ಹುಬ್ಬಳ್ಳಿ ರೌಂಡ ಟೇಬಲ್ ವತಿಯಿಂದ ಒಂದು ಕೊಠಡಿ ನಿರ್ವಿುಸಲು ಅನುದಾನ ನೀಡುವುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಉಪನಿರ್ದೇಶಕ ಸುರೇಶ ಹುಗ್ಗಿ, ಶಿಕ್ಷಣಾಕಾರಿ ಎಸ್.ಜಿ.ಕೋಟಿ, ತಾ.ಪಂ.ಇಓ ಕೆ.ಎಂ.ಮಲ್ಲಿಕಾರ್ಜುನ, ಬಿಸಿಯೂಟ ಸಹಾಯಕ ನಿರ್ಧೆಶಕ ಎಂ.ಎಫ್.ಹುಳ್ಯಾಳ, ಬಿ.ಎಂ.ಜಗಾಪುರ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾ ಎರೇಶೀಮಿ, ಸದಸ್ಯರಾದ ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಪುರಸಭೆ ಸದಸ್ಯ ಶಂಕರ ಕುಸಗೂರ ಎಸ್ಡಿಎಂಸಿ ಅಧ್ಯಕ್ಷ ರವಿ ಪೂಜಾರ, ಮಂಜುನಾಥ ಭೋವಿ, ಶ್ರೀನಿವಾಸ್ ಕುರಕುಂದಿ, ಮುಖ್ಯಶಿಕ್ಷಕಿ ರಾಜೇಶ್ವರಿ ಸಜ್ಜೇಶ್ವರ, ಎಸ್.ಯು.ಮಾಸ್ತಿ, ಸುಭಾಸ ಗಡ್ಡದ ಇದ್ದರು.