ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಆಷಾಢ ಮಾಸದ 3ನೇ ಶುಭ ಶುಕ್ರವಾರ ಪ್ರಯುಕ್ತ ವಿವಿಧ ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ಕೈಕಂರ್ಯಗಳು ವಿಜೃಂಭಣೆಯಿಂದ ಜರುಗಿದವು.
ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಅರ್ಚಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಮುಂಜಾನೆಯಿಂದ ಫಲಪಂಚಾಮೃತ ಅಭಿಷೇಕ, ಅರಿಶಿನ-ಕುಂಕುಮ, ಅಭಿಷೇಕ, ಮಹಾನ್ಯಾಸಪೂರಕ ಅಭಿಷೇಕ, ದುರ್ಗಾ ಸಪ್ತಶತಿ ಪಾರಾಯಣ, ಸಹಸ್ರನಾಮ, ಅಷ್ಟೋತ್ತರ, ಮಹಾಪೂಜೆ ಸೇರಿದಂತೆ ವಿಶೇಷ ರೇಷ್ಮೇ ವಸ್ತ್ರ-ಆಭರಣಗಳ ಅಲಂಕಾರ ನೆರವೇರಿಸಿ ಮಹಾಮಂಗಳಾರತಿ ಅರ್ಪಿಸಲಾಯಿತು.
3ನೇ ಶುಕ್ರವಾರ ಪ್ರಯುಕ್ತ ದೇವಾಲಯ ಹಾಗೂ ಗರ್ಭಗುಡಿಯನ್ನು ಬಾಳೆಯ ದಿಂಡು ಮತ್ತು ವೈವಿಧ್ಯಮಯ ಹೂವುಗಳಿಂದ ಸುಮಾರು 30ಕ್ಕೂ ಹೆಚ್ಚು ವೈದಿಕರು ವರ್ಣರಂಜಿತವಾಗಿ ಶೃಂಗರಿಸಿದ್ದರು. ಶ್ರೀರಂಗಪಟ್ಟಣ-ಗಂಜಾಂ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳ ಭಕ್ತರು ಕುಟುಂಬ ಸಮೇತ ಆಗಮಿಸಿ ಸರತಿ ಸಾಲಿನಲ್ಲಿ ದೇವಿಯ ದರ್ಶನ ಪಡೆದರು.
ಪಟ್ಟಣ ವ್ಯಾಪ್ತಿಯ ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದಲ್ಲಿ ಕೂಡ ಮುಂಜಾನೆಯಿಂದಲೂ ವೈದಿಕರು ವಿವಿಧ ಪೂಜಾಕ್ರಮಗಳನ್ನು ನೆರವೇರಿಸಿದರು. ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧೆಡೆಯಿಂದ ದೇವಿಯ ದರ್ಶನಕ್ಕೆ ಭಕ್ತರ ದಂಡು ಹರಿದುಬಂದಿತ್ತು.
ಪಟ್ಟಣದ ಮುಖ್ಯರಸ್ತೆಯಲ್ಲಿನ ಗ್ರಾಮದೇವತೆ ಶ್ರೀಮಾರಮ್ಮ, ಶ್ರೀವೀರಲಕ್ಷ್ಮೀಯ ದೇವಾಲಯದಲ್ಲಿ ಆಷಾಢ ಮಾಸದ 3ನೇ ಶುಕ್ರವಾರದ ಪ್ರಯುಕ್ತ ದೇವಾಲಯ ಹಾಗೂ ಗರ್ಭಗುಡಿಯನ್ನು ವಿಶೇಷ ಹೂವು ಹಾಗೂ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದ್ದು, ಶಕ್ತಿದೇವಿಗೆ ಬ್ರಾಹ್ಮೀ ಮೂಹರ್ತದಲ್ಲಿ ದೇಗುಲದ ಪ್ರಧಾನ ಅರ್ಚಕ ಕೃಷ್ಣ ಭಟ್ ನೇತೃತ್ವದಲ್ಲಿ ಅಭಿಷೇಕ, ಮಹಾಮಂಗಳಾರತಿ, ರೇಷ್ಮೇ ವಸ್ತ್ರಗಳು ಹಾಗೂ ಒಡವೆಗಳನ್ನು ತೊಡಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ದೇಗುಲದ ಹೊರಭಾಗದಲ್ಲಿ ಲಕ್ಷ್ಮೀದೇವಿ ಯುವ ಬಳಗ ಹಾಗೂ ಕಾಂಪೌಂಡ್ ಬಾಯ್ಸ ವತಿಯಿಂದ ವಿದ್ಯುತ್ ದೀಪಲಂಕಾರ, ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು.