ಬೆಂಗಳೂರು: ನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬನದ ಹುಣ್ಣಿಮೆ ಹಾಗೂ ಬ್ರಹ್ಮರಥೋತ್ಸವ ವೈಭವಯುತವಾಗಿ ಜರುಗಿತು.
ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರಗಳನ್ನು ಮಾಡಲಾಗಿತ್ತು. ದೇವಾಲಯದ ಸುತ್ತಮುತ್ತ ಜಾತ್ರೆಯ ವಾತಾವರಣ ನಿರ್ವಣವಾಗಿತ್ತು. ಶುಕ್ರವಾರ ಆಗಿದ್ದರಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಅಮ್ಮನ ದರ್ಶನ ಪಡೆದರು.
ದೇವಿಗೆ ಮಂಗಳವಾರ ಮತ್ತು ಶುಕ್ರವಾರ ವಿಶೇಷ ದಿನವಾಗಿದ್ದು, 15 ವರ್ಷಗಳ ಹಿಂದೆ ಬನದ ಹುಣ್ಣಿಮೆ ಮಂಗಳವಾರ ಬಂದಿತ್ತು. ಈ ಬಾರಿ ಬನದ ಹುಣ್ಣಿಮೆ ಶುಕ್ರವಾರ ಬಂದಿರುವುದರಿಂದ 1.5 ಲಕ್ಷಕ್ಕೂ ಹೆಚ್ಚು ಮಂದಿ ಉತ್ಸವದಲ್ಲಿ ಭಾಗವಹಿಸಿದ್ದರು.
ಧನುರ್ವಸದ ನಿಮಿತ್ತ ಮುಂಜಾನೆಯೇ ದೇವಿಗೆ ಅಭಿಷೇಕ ಮಾಡಿ, ವಿಶೇಷ ಹೂವಿನ ಅಲಂಕಾರ, ಶಾಕಾಂಬರಿ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 12.30ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಕೃತಾರ್ಥರಾದರು. ಸಂಜೆ 7.30ಕ್ಕೆ ಮೂಲ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ದೇವಾಲಯದ ಇಡೀ ಆವರಣವನ್ನು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿತ್ತು.
ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಟ್ಟಿ ಕುಸ್ತಿ, ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿದ್ದ ಜಾನಪದ ಕಲಾ ಮೇಳಕ್ಕೆ ಸಚಿವ ಆರ್. ಅಶೋಕ್ ಚಾಲನೆ ನೀಡಿದರು.
ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.