ಆಲಮಟ್ಟಿ: ಚಿಮ್ಮಲಗಿ ಭಾಗ-1 ಎ ಮತ್ತು ಚಿಮ್ಮಲಗಿ ಭಾಗ-1 ಬಿ ಪುನರ್ವಸತಿ ಕೇಂದ್ರಗಳ ಸಾರ್ವಜನಿಕ ಆಸ್ತಿಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಶೀಘ್ರವೇ ಮನೆ ಮನೆ ಸಮೀಕ್ಷೆ ಕಾರ್ಯ ಆರಂಭಗೊಳ್ಳಲಿದೆ ಎಂದು ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಸೋಮವಾರ ಇಲ್ಲಿನ ಕೆಬಿಜೆಎನ್‌ಎಲ್ ಎಂಡಿ ಕಚೇರಿ ಸಭಾಂಗಣದಲ್ಲಿ ಕಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಚಿಮ್ಮಲಗಿ ಭಾಗ-1ಎನಲ್ಲಿ ಆರು, ಭಾಗ-1 ಬಿಯಲ್ಲಿ 32 ಸಾರ್ವಜನಿಕ ಆಸ್ತಿಗಳ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಅದರಲ್ಲಿ ಹಲವರು ಅಕ್ರಮ ಮನೆ, ತಗಡಿನ ಶೆಡ್ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಕಚೇರಿಯಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ ಒತ್ತುವರಿ ಎಂದು ಖಾತ್ರಿಗೊಳಿಸಿಕೊಂಡು ಅವರಿಗೆ ನೋಟಿಸ್ ನೀಡಿ, ಅವರ ಬಳಿಯಿರುವ ಆಸ್ತಿಯ ದಾಖಲಾತಿಗಳನ್ನು ನೀಡಲು ಅವಕಾಶ ನೀಡಲಾಗುವುದು, ಕಾನೂನುಬದ್ಧವಿದ್ದರೆ ಆ ಆಸ್ತಿಯನ್ನು ಸ್ಥಿರಗೊಳಿಸುತ್ತೇವೆ, ಇಲ್ಲದಿದ್ದರೆ ಎ್ಐಆರ್ ದಾಖಲಿಸಲಾಗುವುದು ಎಂದರು.
ಚಿಮ್ಮಲಗಿ ಭಾಗ-2 ಪುನರ್ವಸತಿ ಕೇಂದ್ರದಲ್ಲಿನ ಸಾರ್ವಜನಿಕ ಆಸ್ತಿಗಳ ಸಮೀಕ್ಷೆ ಕಾರ್ಯವೂ ಸೋಮವಾರದಿಂದ ಆರಂಭಗೊಂಡಿದ್ದು ನಂತರ ಮೂರು ಪುನರ್ವಸತಿ ಕೇಂದ್ರಗಳಲ್ಲಿನ ಸಂತ್ರಸ್ತರ ಆಸ್ತಿಯ ನೈಜತೆಯ ಬಗ್ಗೆ ಪರಿಶೀಲನೆ ಜತೆಗೆ ಸಮೀಕ್ಷೆ ಕಾರ್ಯ ನಡೆಯಲಿದೆ. ಒಂದೇ ಹಕ್ಕುಪತ್ರ ಹಲವರಿಗೆ, ನಕಲಿ ಹಕ್ಕುಪತ್ರದೊಂದಿಗೆ ನಿವೇಶನ ಮಂಜೂರು ಸೇರಿದಂತೆ ಸಾಕಷ್ಟ್ಟು ಅಕ್ರಮಗಳು ನಡೆದಿದ್ದು ಅವುಗಳ ಸವಿವರ ಪರಿಶೀಲನೆ ನಡೆಸಲಾಗುವುದು ಎಂದರು.
ನನ್ನ ಅಧ್ಯಕ್ಷತೆಯಲ್ಲಿಯೇ ತಂಡ ರಚನೆಗೊಂಡಿದೆ. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ಸ್ಥಗಿತಗೊಂಡಿತ್ತು. ಈಗ ಮತ್ತೆ ಸಮೀಕ್ಷೆ ಆರಂಭಗೊಳ್ಳಲಿದೆ ಎಂದರು.
ಸಭೆಯಲ್ಲಿ ಆಲಮಟ್ಟಿಯ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಮೋಹನ ನಾಗಠಾಣ, ಜಮಖಂಡಿ ಪುನರ್ವಸತಿ ಅಧಿಕಾರಿ ಗಂಗಾಧರ ಮಳಗಿ, ಇಂಡಿ ವಿಶೇಷ ಭೂಸ್ವಾಧೀನಾಧಿಕಾರಿ ಆರ್.ಎಸ್. ರೇವಡಿಗಾರ, ಪುನರ್ವಸತಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್. ಹಿರೇಗೌಡರ ಇತರರಿದ್ದರು.