ಜಿಲ್ಲೆ

ಮಂಗಳೂರು ಸಿಟಿ ಬಸ್‌ಗಳಲ್ಲಿ ಚಲೋ ಸೂಪರ್ ಸೇವರ್ ಯೋಜನೆ ಆರಂಭ

Dakshina Kannada

ಮಂಗಳೂರು: ಮಂಗಳೂರಿನಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಚಲೋ ಸೂಪರ್ ಸೇವರ್ ಪ್ಲಾನ್ ಎಂಬ ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ಯೋಜನೆ ಆರಂಭಿಸಲಾಗಿದೆ. ಪ್ರಯಾಣಿಕರಿಗೆ ಪ್ರತಿ ಟ್ರಿಪ್‌ಗೆ ಸರಾಸರಿ 3.99 ರೂ. ವೆಚ್ಚದಲ್ಲಿ ಪ್ರಯಾಣಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ದ.ಕ. ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು ಹೇಳಿದರು.

ಚಲೋ ಸೂಪರ್ ಸೇವರ್ ಯೋಜನೆಗಳನ್ನು ಚಲೋ ಕಾರ್ಡ್‌ನಲ್ಲಿ ಖರೀದಿಸಬಹುದು ಮತ್ತು ಮಂಗಳೂರಿನ ಎಲ್ಲ ಸಿಟಿ ಬಸ್‌ಗಳಲ್ಲಿ ಮಾನ್ಯವಿರುತ್ತದೆ. ಸದ್ಯ ಮಂಗಳೂರಿನಲ್ಲಿ ಒಂದೇ ಟ್ರಿಪ್ ಬಸ್ ಟಿಕೆಟ್ ಮಾತ್ರ ನೀಡಲಾಗುತ್ತದೆ. ಹೊಸ ಯೋಜನೆ ಪ್ರಕಾರ 7 ದಿನಗಳು ಅಥವಾ 28 ದಿನಗಳ ಕಾರ್ಡ್ ಪಡೆದುಕೊಳ್ಳಬಹುದು. ಪ್ರಸ್ತುತ, ಸೂಪರ್ ಸೇವರ್ ಯೋಜನೆಗಳನ್ನು ಎಲ್ಲ ಮಾರ್ಗಗಳಲ್ಲಿ ಹಾಗೂ ಬಸ್‌ಗಳಲ್ಲಿ ಬಳಸಬಹುದು ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೈನಂದಿನ ಪ್ರಯಾಣಿಕರು ಒಂದು ಟ್ರಿಪ್‌ಗೆ 10 ರೂ. ಪಾವತಿ ಮಾಡುತ್ತಾರೆ. ಸೂಪರ್ ಸೇವರ್ 399 ಯೋಜನೆಯ ಕಾರ್ಡಿನೊಂದಿಗೆ ಅವರು 28 ದಿನಗಳಲ್ಲಿ 100 ಟ್ರಿಪ್ ಪ್ರಯಾಣಿಸಲು ಅವಕಾಶವಿದೆ. ಅವರು ಪ್ರತಿ ಟ್ರಿಪ್‌ಗೆ ಕೇವಲ 3.99 ರೂ. ನೀಡಿದಂತಾಗುತ್ತದೆ. ಈ ಪ್ಲಾನ್‌ಗಳನ್ನು 1 ದಿನದಲ್ಲಿ ಗರಿಷ್ಟ 4 ಟ್ರಿಪ್‌ಗಳಿಗೆ ಉಪಯೋಗಿಸಲು ಅವಕಾಶವಿದೆ ಎಂದರು.

ಚಲೋ ಸೂಪರ್ ಸೇವರ್ ಯೋಜನೆಗಳನ್ನು ಪಡೆಯಲು ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಜೆರಾಕ್ಸ್ ಪ್ರತಿ ನೀಡಬೇಕು. ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟಡದಲ್ಲಿರುವ ದ.ಕ. ಬಸ್ ಮಾಲೀಕರ ಸಂಘದ ಕಚೇರಿ, ಸ್ಟೇಟ್‌ಬ್ಯಾಂಕ್ ಎದುರಿನ ಸಿಟಿ ಟವರ್ ಬಿಲ್ಡಿಂಗ್‌ನಲ್ಲಿರುವ ಚಲೋ ಕಚೇರಿ, ಮತ್ತು ಬಲ್ಮಠ ರಸ್ತೆಯಲ್ಲಿನ ಮಾಂಡೊವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್‌ನಲ್ಲಿ ಪಡೆಯಬಹುದು.