ಕರಾವಳಿಯ ರೈತರಿಂದ ವಿಶಿಷ್ಟ ಆಚರಣೆ
ಗದ್ದೆಯಲ್ಲಿ ನಾರುಕೋಲಿನ ದೀಪವಿಟ್ಟು ಪ್ರಾರ್ಥನೆ
ಬೆಳಕಿನ ಹಬ್ಬ ದೀಪಾವಳಿಯೆಂದರೆ ಇತರೆಲ್ಲ ಹಬ್ಬಗಳಿಗಿಂತಲೂ ವಿಶಿಷ್ಟ ಹಾಗೂ ವಿಭಿನ್ನ. ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿಯು ಪ್ರಾದೇಶಿಕವಾಗಿಯೂ ಸಹ ಬೇರೆ ಬೇರೆ ರೀತಿಯಲ್ಲಿ ಆಚರಣೆಗೊಳ್ಳುತ್ತವೆ.
ರಾಜ್ಯದ ಕರಾವಳಿ ಭಾಗವಾದ ಉಡುಪಿ ಜಿಲ್ಲೆಯಲ್ಲೂ ಸಹ ಕೃಷಿಕರು ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಈ ಭಾಗದ ರೈತರು ಗದ್ದೆಗೆ ಹೋಗಿ ಭತ್ತದ ಹೊಸ ಫಸಲನ್ನು ಮನೆಗೆ ತಂದು ಸಂಭ್ರಮಿಸುವುದಲ್ಲದೆ, ಬಲೀಂದ್ರನನ್ನು ಕರೆದು ಪೂಜಿಸುತ್ತಾರೆ.
ಬಲೀಂದ್ರನಿಗೆ ಆಹ್ವಾನ
ದೀಪಾವಳಿಯ ಎರಡನೇಯ ದಿನ ತಮ್ಮಗದ್ದೆಗಳಿಗೆ ಹೋಗಿ ಭತ್ತದ ತೆನೆಗಳಿಗೆ ಪೂಜಿಸುತ್ತಾರೆ. ಭೂಮಿಗೂ (ಭೂದೇವಿ) ಸಹ ಮಂಗಳಾರತಿ ಮಾಡುತ್ತಾರೆ. ಬಳಿಕ, ಕರಾವಳಿ ಭಾಗವನ್ನು ಆಳಿದ ಅರಸನೂ ಆಗಿದ್ದ ಎಂಬ ನಂಬಿಕೆಯಿಂದ ಪಾತಾಳದಲ್ಲಿರುವ ಬಲೀಂದ್ರನನ್ನು ಹೊಗಳಿ ಮೇಲೆ ಬರುವಂತೆ ಕರೆಯುತ್ತಾರೆ. ತಮ್ಮದೇ ಭಾಷೆಯಲ್ಲಿ ಹೊಲಿ ಕೊಟ್ರೋ, ಬಲಿ ತಗಂಡ್ರೋ, ಬಲಿನ್ ದೇವರ್ ತಮ್ಮ್ ರಾಜ್ಯಕ್ಕೆ ತಾವೇ ಬಂದ್ರೋ, ಬಲಿಯೇ ಬಾ... ಕೂ ಕೂ ಕೂ ಎಂದು ಪ್ರಾರ್ಥಿಸುತ್ತಾರೆ.
ನಾರುಕೋಲಿನಿಂದ ತಯಾರಿಸಿದ ದೀಪ
ದೀಪಾವಳಿ ಹಬ್ಬದ ಬಲೀಂದ್ರ ಪೂಜೆಯಂದು ನಾರು ಹೊಂದಿರುವ ಗಿಡದ ಕೋಲಿನಿಂದ ದೀಪ ತಯಾರಿಸಿ ಅದನ್ನು ಬೆಳಗಿ ಗದ್ದೆಯಲ್ಲಿ ಇಡಲಾಗುತ್ತದೆ. ನಾರುಕೋಲನ್ನು ಒಂದು ತಿಂಗಳ ಮೊದಲೇ ನೀರಿನಲ್ಲಿ ನೆನೆಸಿ, ಬಳಿಕ ಅದರ ಮೇಲ್ಭಾಗದ ಹಸಿರು ಸಿಪ್ಪೆ ತೆಗೆದು ಬಿಳಿಯಾಗಿ ಗೋಚರಿಸುವ ಆ ಕೋಲನ್ನು ಮತ್ತೆ 2-3 ದಿನ ಬಿಸಿಲಲ್ಲಿ ಒಣಗಿಸುತ್ತಾರೆ. ದೀಪಾವಳಿ ಹಬ್ಬದ ಬಲೀಂದ್ರ ಪೂಜೆಯ ದಿನ ಅದೇ ನಾರುಕೋಲಿಗೆ ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಮೇಲ್ಭಾಗದಲ್ಲಿ ಕಟ್ಟಿ ಬತ್ತಿಯನ್ನಾಗಿ ತಯಾರಿಸುತ್ತಾರೆ. ಸಂಜೆ 7 ಗಂಟೆಯ ಬಳಿಕ ಭತ್ತದ ಗದ್ದೆಗಳಲ್ಲಿ ನಾರುಕೋಲಿನ ದೀಪಹಚ್ಚಿ ಬಲೀಂದ್ರನನ್ನು ಕರೆಯುವುದು ಈ ಭಾಗದ ವಾಡಿಕೆ.
ಉಡುಪಿ ಜಿಲ್ಲೆಯ ಸಿದ್ದಾಪುರ ಭಾಗದ ಕೃಷಿಕರು ಬಲೀಂದ್ರ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತೇವೆ. ಬಲಿ ಚಕ್ರವರ್ತಿಗಾಗಿ ದಾನವನಾಗಿದ್ದರೂ ಸಹ ಪ್ರಜಾಪಾಲಕನೇ ಆಗಿದ್ದನು. ವಾಮನ ಅವತಾರಿ ವಿಷ್ಣುವಿನ ವರದಂತೆ ದೀಪಾವಳಿಯಲ್ಲಿ ಒಂದು ದಿನ ಮತ್ತೆ ಭೂಮಿಗೆ ಆತ ಬರುತ್ತಾನೆಂಬ ನಂಬಿಕೆ ಇದೆ. ನಾರುಕೋಲಿನಿಂದ ತಯಾರಿಸಿದ ದೀಪ ಹಚ್ಚಿ, ವಿವಿಧ ಬಗೆಯ ಹೂವುಗಳಿಂದ ಭೂಮಿಗೆ ಪೂಜಿಸುತ್ತೇವೆ. ಊರು ಮುಳ್ಳುಸೌತೆ ಕಾಯಿ, ಅರಿಶಿನ ಎಲೆಯಿಂದ ಮಾಡಿದ ಹಿಟ್ಟು, ವೀಳ್ಯದೆಲೆ, ಅಡಕೆಯನ್ನು ಗದ್ದೆಗೆ ಸಮರ್ಪಿಸಿ ಬಲೀಂದ್ರ ದೇವರನ್ನು ಕರೆಯುವ ಸಂಪ್ರದಾಯ ನಮ್ಮ ಭಾಗದಲ್ಲಿ ಆಚರಣೆಯಲ್ಲಿದೆ.
| ರಾಜೇಂದ್ರ ಬೆಚ್ಚಳ್ಳಿ. ಸಿದ್ದಾಪುರದ ಭತ್ತ ಕೃಷಿಕ.
ಕೃಷ್ಣನ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ
ಉಡುಪಿಯ ಶ್ರೀಕೃಷ್ಣ ಮಠದಲ್ಲೂ ಸಹ ಪ್ರತಿವರ್ಷದ ದೀಪಾವಳಿಯ ಸಂದರ್ಭದಲ್ಲಿ ಬಲೀಂದ್ರ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರಸಕ್ತ ವರ್ಷ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬಲೀಂದ್ರ ಪೂಜೆ ಹಾಗೂ ಲಕ್ಷ್ಮೀ ಪೂಜೆ ನಡೆಯಿತು. ಮಠದ ಪುರೋಹಿತ ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ಎಲ್ಲ ಬಗೆಯ ಪೂಜಾ ವಿಧಿ-ವಿಧಾನಗಳು ನೆರವೇರಿತು. ಮಠದ ಒಳಗೆ ರಂಗೋಲಿ ಹುಡಿಯಲ್ಲಿ ರಚಿಸಿದ್ದ ಬಲೀಂದ್ರ ಚಕ್ರವರ್ತಿಗೆ ವಿಶೇಷ ಚತುರ್ದೀಪವಿರುವ ಹರಿವಾಣದಲ್ಲಿ ಮಂಗಳಾರತಿ ಬೆಳಗಲಾಯಿತು. ವಿಷ್ಣುವಿನ ಅವತಾರವೇ ಆಗಿರುವ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುವ ಬಲೀಂದ್ರ ಪೂಜೆಯು ವಿಶೇಷವಾಗಿದೆ. ದೀಪಾವಳಿಯು ಎಲ್ಲರಿಗೂ ಒಳಿತಾಗಲಿ. ಮನದಲ್ಲಿರುವ ಅಜ್ಞಾನದ ಕತ್ತಲೆಯು ಹಣತೆಯಿಂದ ಪ್ರಕಾಶಿಸುವ ಬೆಳಕಿನಿಂದ ಕರಗಲಿ. ಸಕಲರಿಗೂ ಶ್ರೀಕೃಷ್ಣ ಅನುಗ್ರಹಿಸಲಿ ಎಂದು ಸುಗುಣೇಂದ್ರ ಶ್ರೀ ಆಶೀರ್ವದಿಸಿದರು.