ಚಾಮನಹಳ್ಳಿ ನಾಲೆಯ ಸರಪಳಿ 5 ಕಿ.ಮೀ.ನಲ್ಲಿನ ಅಕ್ವಡೆಕ್ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ಮಾಡಿದರು. ಪಿ.ಸಂದರ್ಶ, ಸಿದ್ದರಾಜು, ರಾಜೀವ್, ಸಂದೀಪ್, ಅಶೋಕ್, ರಾಮಯ್ಯ ಇದ್ದರು.  
ಜಿಲ್ಲೆ

ನಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ

ನಾಗೇಶ ಎಸ್

ಮದ್ದೂರು: ತಾಲೂಕಿನಲ್ಲಿರುವ ನಾಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ಚಾಮನಹಳ್ಳಿಯಲ್ಲಿ ಮದ್ದೂರು ಕೆರೆಯ ವ್ಯಾಪ್ತಿಯಲ್ಲಿ ಬರುವ ಚಾಮನಹಳ್ಳಿ ನಾಲೆಯ ಸರಪಳಿ 5 ಕಿ.ಮೀ.ನಲ್ಲಿನ ಅಕ್ವಡೆಕ್‌ನ ಉಳಿಕೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದ ಕೆಮ್ಮಣ್ಣು ನಾಲೆ ಸೇರಿದಂತೆ ತಾಲೂಕಿನ ಬಹುತೇಕ ನಾಲೆಗಳನ್ನು ಆಧುನಿಕರಣಗೊಳಿಸಲು ಈಗಾಗಲೇ ಯೋಜನೆ ರೂಪಿಸಿದ್ದು, ಶೀಘ್ರವಾಗಿ ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಮಾಡಲಾಗುವುದು. ಹಲವಾರು ವರ್ಷಗಳಿಂದ ಅಕ್ವಡೆಕ್ ನಿರ್ಮಾಣವಾಗದ ಹಿನ್ನೆಲೆಯಲ್ಲಿ ನೀರು ಸಮರ್ಪಕವಾಗಿ ಮುಂದಕ್ಕೆ ಹರಿಯದೆ, ರೈತರಿಗೆ ತುಂಬಾ ತೊಂದರೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಶೀಘ್ರವಾಗಿ ಕಾಮಗಾರಿಗೆ ಮುಗಿದು ರೈತರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ಅಕ್ವಡೆಕ್ ನಿರ್ಮಾಣಕ್ಕೆ ರೈತರಿಂದ ಭೂಮಿ ವಶಪಡಿಸಿಕೊಂಡಿದ್ದು ಅಧಿಕಾರಿಗಳು ಸೂಕ್ತ ಪರಿಹಾರ ನೀಡಿಲ್ಲ ಮತ್ತು ಕಾಮಗಾರಿ ಮಾಡುವ ಸಂಬಂಧ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ರೈತರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಶಾಸಕ ಕೆ.ಎಂ.ಉದಯ್, ಸ್ಥಳದಲ್ಲಿದ್ದ ನೀರಾವರಿ ಅಧಿಕಾರಿಗಳನ್ನು ಕರೆದು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಇದಕ್ಕೆ ರೈತರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಗ್ರಾಪಂ ಅಧ್ಯಕ್ಷ ಸಿದ್ದರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಪಿಡಿಒ ಸಂದೀಪ್, ಮುಖಂಡರಾದ ಅಶೋಕ್, ಸಿ.ಪಿ.ಕೃಷ್ಣ, ಅರ್ಜುನ, ರಾಮಯ್ಯ, ತ್ಯಾಗರಾಜು, ವಸಂತರಾಜು, ಬ್ಯಾಂಕ್ ಶ್ರೀನಿವಾಸ್, ಬೋರೇಗೌಡ, ನಂದೀಶ್ ಇತರರು ಇದ್ದರು.