| ಕೃಷ್ಣರಾಜ ಕುತ್ಪಾಡಿ
ಒಬ್ಬ ಯತಿಯಾಗಿ ಸನ್ಯಾಸ ಧರ್ಮದ ಎಲ್ಲೆಯನ್ನು ಎಳ್ಳಷ್ಟೂ ಮೀರದೆ ಎಲ್ಲೆಡೆ ಹಬ್ಬಿಕೊಂಡು ಸಮಾಜದಲ್ಲಿ ಬೆರೆತು, ಅಂಕುಡೊಂಕುಗಳನ್ನು ತಿದ್ದುತ್ತಿದ್ದ ಅಪರೂಪದ ಯೋಗಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ವಿದ್ಯುತ್ ಬಲ್ಬಿನಂತೆ ಇದ್ದಲ್ಲಿಂದಲೇ ಹತ್ತಾರು ಅಡಿಗಳಷ್ಟು ದೂರಕ್ಕೆ ಬೆಳಕು ಚೆಲ್ಲಿದ ವಿರಳ ಹಾಗೂ ಸರಳ ವ್ಯಕ್ತಿತ್ವ ಶ್ರೀಗಳದ್ದು. ವಿಮಶಿಸುವಾಗ, ಇಡೀ ವ್ಯವಸ್ಥೆಯ ಹೊಣೆ ಹೆಗಲ ಮೇಲಿದ್ದಾಗ ಎಂಥ ದೊಡ್ಡ ವ್ಯಕ್ತಿಯಾದರೂ ಕದಲುತ್ತಾರೆ. ಅವ್ಯವಸ್ಥೆಯ ಕುರುಹು ಕೂಡ ಕಾಣದಂತೆ ನಿಭಾಯಿಸುವ ಶಕ್ತಿ ಕಾಣುವುದು ಅಪರೂಪ. ಆ ಮಟ್ಟದಲ್ಲಿ ನಿಂತು ಆಲೋಚಿಸಿ, ತನ್ನ ನಿಲುವಿನ ಕುರಿತಾದ ಸ್ಪಷ್ಟತೆ ಹೊಂದಿದ್ದರು. ಶ್ರೀರಾಮನ ಆದರ್ಶ, ಶಿಬಿ, ರಂತಿದೇವರಂಥವರ ಪ್ರೇರಣೆ ಇವುಗಳಿಂದ ರೂಪುಗೊಂಡ ಮೂರ್ತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ರಾಷ್ಟ್ರದೇವೋಭವ ಎಂಬ ಧ್ಯೇಯ ವಾಕ್ಯವನ್ನು ನಿರಂತರ ಸಾರಿದವರು. ಮನುಷ್ಯತ್ವವೇ ಎಲ್ಲಕ್ಕಿಂತಲೂ ಮುಖ್ಯ ಎಂಬ ಸಂತನಲ್ಲಿರಬೇಕಾದ ಗಟ್ಟಿತನವೇ ಅವರನ್ನು ಯತಿಕುಲ ಚಕ್ರವರ್ತಿಯನ್ನಾಗಿಸಿತು.
ಶಿಸ್ತು, ಸಂಘಟನೆ, ಸರಳತೆ, ವಿರಕ್ತಿ, ಜೀವನಪ್ರೀತಿ, ಧರ್ಮದ ಬಗೆಗಿನ ಅಭಿಮಾನ ಇವರನ್ನು ವಿಶ್ವಸಂತರನ್ನಾಗಿಸಿತು. ಗುಜರಾತ್, ಮಣಿಪುರ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಮಹಾರಾಷ್ಟ್ರ ಹೀಗೆ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಕಡೆಗೆಲ್ಲ ಸಹಾಯದ ಕೈಚಾಚಿದ್ದರು.
ಬಾಯಿಬರದ ಮೂಕ ವೇದನೆ ಅನುಭವಿಸಿದ ಗೋವುಗಳ ಮೇವಿಗಾಗಿ ಗೋಸೇವಾಕೇಂದ್ರವನ್ನು ತೆರೆದು ಸಹಸ್ರಾರು ಗೋವುಗಳ ಪೋಷಣೆಯ ಹೊಣೆ ಹೊತ್ತರು. ಪುಟ್ಟಪುಟ್ಟ ಕರುಗಳ ನಗೆಯಲ್ಲಿ ತಮ್ಮ ನಗುವನ್ನು ಕಂಡರು. ‘ಸಂತೋಷಂ ಜನಯೇತ್ ಪ್ರಾಜ್ಞಃ’ ಎಂಬ ಮಾತಿಗೆ ಭಾಷ್ಯವಾದರು. ಫಲಾಪೇಕ್ಷೆ ಇಲ್ಲದೆ ನಿರ್ಮಲಚಿತ್ತರಾಗಿ ಜನತಾ ಜನಾರ್ದನರ ಸೇವೆಗೈದ ಕರ್ಮಯೋಗಿ. ಯಾರೇ ಏನೇ ಕಷ್ಟ ಹೊತ್ತು ಬರಲಿ, ಶ್ರೀಗಳ ಬಳಿ ಅದರ ಪರಿಹಾರಕ್ಕೆ ಬರವಿಲ್ಲ. ರಸ್ತೆ ಸಂಪರ್ಕವೇ ಇಲ್ಲದ ದೂರದೂರಿನ ದಲಿತರ ಕೇರಿಗೆ, ನಕ್ಸಲ್ ಪೀಡಿತ ಪ್ರದೇಶಗಳಿಗೆ ಹೋಗಿ ಅವರ ಕಷ್ಟಕ್ಕೆ ನೆರವಾದರು. ಹಗಲು ರಾತ್ರಿ ಎನ್ನದೆ ಜೊತೆಯಾದರೂ ರಾಷ್ಟ್ರನಾಯಕರ ತ್ಯಾಗ ಬಲಿದಾನಗಳಿಂದ ಸ್ಪೂರ್ತಿ ಪಡೆದಿದ್ದ ಗುರುಗಳು ತಮ್ಮಲ್ಲಿ ಮೂಡಿದ್ದ ಚಿಂತನೆಗೆ ಕ್ರಿಯೆಯ ರೂಪ ಕೊಟ್ಟರು.
ಪೇಜಾವರ ಶ್ರೀಗಳ ಬಗ್ಗೆ ಹೇಳುವಾಗ ಅವರ ಮಿಂಚಿನ ಸಂಚಾರದ ಬಗೆಗೂ ಹೇಳಲೇಬೇಕು. ಅವರ ಒಂದು ತಿಂಗಳ ಸಂಚಾರ ಸುಮಾರು ನಾಲ್ಕೈದು ಸಾವಿರ ಕಿಲೋಮೀಟರ್ಗೂ ಹೆಚ್ಚು ಎಂದರೆ ಊಹಿಸುವುದೂ ಅಸಾಧ್ಯ. ದಿನಕ್ಕೆ ಹತ್ತಾರು ಕಡೆ ಓಡಾಟ, ಆದರೂ ಒಂದು ದಿನವೂ ತಪ್ಪುತಿರಲಿಲ್ಲ ಶಾಸ್ತ್ರ ಪಾಠ. ಅವರ ಜೊತೆಗೆ ಸಂಚಾರವೇ ಒಂದು ಜೀವನ ಪಾಠ. ರಾತ್ರಿ 12 ಗಂಟೆ ಆದರೂ ಸರಿಯೇ; ಜಪ ,ತರ್ಪಣ, ಪಾಠಗಳನ್ನು ಬಿಟ್ಟವರೇ ಅಲ್ಲ. ಈ ಎಲ್ಲ ಉತ್ಸಾಹಕ್ಕೂ ಬೆಳಗಿನ ಯೋಗದ ಸಹಯೋಗವಂತು ತಪ್ಪಿದ್ದಲ್ಲ. ಮಧ್ಯಾಹ್ನದ 10 ನಿಮಿಷದ ನಿದ್ರೆ ಹಾಗೂ ನಿಯಮಿತ ಆಹಾರ ಪದ್ಧತಿ, ಇವು ಕೂಡ ಅವರ ಉತ್ಸಾಹಕ್ಕೆ ಸಾಥ್ ನೀಡಿದ್ದವು. ಒಮ್ಮೆ ಸ್ವೀಕರಿಸಿದ ಆಹಾರ ಜೀರ್ಣವಾದ ಮೇಲೆ ಮತ್ತೆ ಊಟ, ಇಲ್ಲವಾದರೆ ಉಪವಾಸ. ಇದು ಗುರುಗಳ ಆಹಾರದ ಕ್ರಮ.
1956ರಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠವನ್ನು ಸ್ಥಾಪಿಸಿದ ಶ್ರೀಗಳು, ಅದನ್ನು ತಾಯಿಯಂತೆ ಸಲಹಿದ್ದಾರೆ. ವೇದ , ವೇದಾಂತ, ನ್ಯಾಯ, ವ್ಯಾಕರಣ, ಮೀಮಾಂಸಾ, ಅಲಂಕಾರ, ಧರ್ಮಶಾಸ್ತ್ರ, ಜ್ಯೌತಿಷ, ಪೌರೋಹಿತ್ಯ ಹೀಗೆ ಹಲವು ಶಾಸ್ತ್ರ ಸಂರಕ್ಷಣೆಯ ಕಾರ್ಯವು ವಿದ್ಯಾಪೀಠದಲ್ಲಿ ಅವಿರತವಾಗಿ ನಡೆಯುತ್ತಿದೆ. ಮುಂದೆ, ಸಂಶೋಧನೆಗೆ, ಸಂಪಾದನೆಗೆ ಅನುಕೂಲವಾಗುವಂತೆ ಪೂರ್ಣಪ್ರಜ್ಞ ಸಂಶೋಧನಾ ಮಂದಿರವನ್ನೂ ಸ್ಥಾಪಿಸಿದರು. ಶ್ರೀಪಾದರ ದೂರದೃಷ್ಟಿ ಮತ್ತು ಮಾರ್ಗದರ್ಶನದಿಂದ ಈ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಪ್ರಮುಖವಾಗಿವೆ. ಜೊತೆಗೆ ರಜೆ ಸಮಯದಲ್ಲಿ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಧಾರ್ವಿುಕ ಆಸಕ್ತಿ ಮೂಡಿಸಲು ಹಾಗೂ ರಜೆಯನ್ನು ಸಫಲವನ್ನಾಗಿಸಿಕೊಳ್ಳಲು ಧಾರ್ವಿುಕ ಶಿಕ್ಷಣ ಶಿಬಿರಗಳನ್ನು ಏರ್ಪಡಿಸುವ ಕಾರ್ಯವನ್ನು ಆರಂಭಿಸಿದರು. ಇಂದಿಗೂ ಈ ಶಿಬಿರಗಳು ಅವರ ಅನುಗ್ರಹ ಬಲದಿಂದ, ಅವರ ಶಿಷ್ಯರಾದ ಶ್ರೀವಿಶ್ವಪ್ರಸನ್ನತೀರ್ಥರ ನೇತೃತ್ವದಲ್ಲಿ ಅವಿಚ್ಛಿನ್ನವಾಗಿ ನಡೆಯುತ್ತಿದೆ.
ಶ್ರೀ ವಿಶ್ವೇಶತೀರ್ಥರು ಬರಹಗಾರರೂ ಹೌದು. ಕನ್ನಡ ಸಂಸ್ಕೃತ ಎರಡು ಭಾಷೆಗಳಲ್ಲಿ ಅನೇಕ ಉತ್ತಮವಾದ ಪುಸ್ತಕಗಳನ್ನು, ವಿವಿಧ ಲೇಖನಗಳನ್ನು ಬರೆದಿದ್ದಾರೆ. ಉದಾಹರಣೆಗೆ, ನ್ಯಾಯಾಮೃತ ನವನೀತಮ್ , ಗೀತಾ ಸಾರೋದ್ಧಾರ, ಅವರ ಉಪನ್ಯಾಸಗಳ ಲೇಖನರೂಪವಾದ ರಾಮಾಯಣ ಸಾರ ಹಾಗೂ ಪಾತ್ರ ಚಿತ್ರಣ, ಮಹಾಭಾರತ ಸಾರೋದ್ಧಾರ, ಉಪನಿಷತ್ ಸಾರ ಇತ್ಯಾದಿ. ಪಾಠ- ಪ್ರವಚನ, ಬರವಣಿಗೆ, ಸಂಸ್ಥೆಗಳ ಸ್ಥಾಪನೆ - ಚಾಲನೆ, ವಿದ್ಯಾವಂತರ ಪೋಷಣೆ - ಪೋ›ತ್ಸಾಹ, ಪುಸ್ತಕ ಪ್ರಕಟಣೆ - ಪ್ರಕಾಶನ ಹೀಗೆ ಗುರುಗಳು ಬಹುಮುಖವಾಗಿ ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಂಡವರು. ಅವರು ಬದುಕಿರುವಾಗಲೇ ಅವರ ಜೀವನ ಚರಿತ್ರೆ, ‘ವಿಶ್ವೇಶ ವಿಜಯ ಚಂಪೂ’ ಪ್ರಕಟಗೊಂಡಿದ್ದು ಭಕ್ತ ಸಮಾಜಕ್ಕೆ ಅವರನ್ನು ಪರಿಚಯಿಸುವ ಕನ್ನಡಿಯೇ ದೊರೆತಂತಾಗಿದೆ. ಒಂದಂತೂ ಸತ್ಯ. ನಮ್ಮ ಇಂದಿನ ನೆಮ್ಮದಿಯ ಹಿಂದೆ ಅವರ ಬೆವರ ಹನಿ ಇದೆ . ಅವರ ತಪಸ್ಸು , ಶ್ರಮ ನಮ್ಮ ಸಮಾಜವನ್ನು ಸುಸ್ಥಿತಿಯಲ್ಲಿಟ್ಟಿದೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು)