ಜಿಲ್ಲೆ

ಉಚ್ಚಿಲದಲ್ಲಿ ನವದುರ್ಗೆ, ಶಾರದೆಗೆ ಕಾಶಿ ಅರ್ಚಕರಿಂದ ವಿಶೇಷ ಆರತಿ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ 10ನೇ ದಿನ ಶಾರದೆ ಮಾತೆ ಸೇರಿ ನವದುರ್ಗೆಯರಿಗೆ ಕಾಶಿಯಿಂದ ಆಗಮಿಸಿದ ಅರ್ಚಕರಿಂದ ವಿಶೇಷ ಆರತಿ, ಶ್ರೀ ಕಲ್ಪೋಕ್ತ ಪೂಜೆ ನೆರವೇರಿತು. ಬೆಳಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀಮತಿ ಶಾಲಿನಿ ಡಾ. ಜಿ.ಶಂಕರ್ ಸಭಾಂಗಣದಲ್ಲಿ ಭಜನಾ ಸಂಕೀರ್ತನೆ, ಭಕ್ತಿ ಗೀತಾಂಜಲಿ ಸಂಗೀತ, ಸ್ಯಾಕ್ಸೋಫೋನ್ ವಾದನ, ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯುವ ಗಾಯಕ ಗಾಯಕಿಯರಿಂದ ಸ್ವರ ದಿ ಬ್ಯಾಂಡ್ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

ದಸರಾಕ್ಕೆ ಸೇವೆ, ಸಹಕಾರ ನೀಡಿದ ಮಹನೀಯರನ್ನು ಗುರುತಿಸಿ ಗೌರವಿಸಲಾಯಿತು. ದಸರಾ ರೂವಾರಿ ನಾಡೋಜ ಜಿ.ಶಂಕರ್, ಪ್ರಸಾದ್‌ರಾಜ್ ಕಾಂಚನ್, ಅಧ್ಯಕ್ಷ ಜಯ ಸಿ.ಕೋಟ್ಯಾನ್, ಸಂಧ್ಯಾದೀಪ ಸುನೀಲ್, ಉಷಾರಾಣಿ ಮಂಗಳೂರು, ಸುಗುಣಾ ಕರ್ಕೇರ ಸನ್ಮಾನ ನೆರವೇರಿಸಿದರು.

*ದೇವಳಕ್ಕೆ ಗಣ್ಯರ ಭೇಟಿ: ಉಚ್ಚಿಲ ದಸರಾ ಉತ್ಸವ ಹಿನ್ನಲೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ದೇವಳಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಅವರನ್ನು ಗೌರವಿಸಲಾಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್.ವೈದ್ಯ ದಂಪತಿ, ನಟ ಕೋಮಲ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಶಾಸಕ ಅರವಿಂದ ಬೆಲ್ಲದ್, ಕುಸುಮಾಧರ ಶೆಟ್ಟಿ ಮುಂಬೈ, ಕೃಷ್ಣಕುಮಾರ್ ಶೆಟ್ಟಿ ಪುಣೆ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.