ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿಧಾನಸಭೆಯಲ್ಲಿ ಹಠ ಹಿಡಿದು ಕಾಂಗ್ರೆಸ್ ಧರಣಿ ನಿರತವಾದ ಸಂದರ್ಭದಲ್ಲಿಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನ ಕುರಿತ ವಿಶೇಷ ಚರ್ಚೆಯ ಪ್ರಾಸ್ತಾವಿಕ ಮಾತನ್ನಾಡಿದ ಪ್ರಸಂಗ ನಡೆಯಿತು.
ಸರಿಸುಮಾರು 43 ನಿಮಿಷ ಮಾತನಾಡಿದ ಸ್ಪೀಕರ್, ಸಂವಿಧಾನದ ಆಶಯ, ಉದ್ದೇಶ, ಕಾರ್ಯನಿರ್ವಹಣೆ, ರಚನೆಯ ಸ್ವಾರಸ್ಯ, ಶಾಸಕರ ಕರ್ತವ್ಯವನ್ನು ಭಾಷಣದಲ್ಲಿ ಉಲ್ಲೇಖಿಸಿದರು. ಭಾಷಣದ ಪೂರ್ತಿ ಕಾಂಗ್ರೆಸ್ ಶಾಸಕರು ಘೋಷಣೆ ಮೊಳಗಿಸುತ್ತಲೇ ಅಡ್ಡಿಪಡಿಸಿದರು. ಜೆಡಿಎಸ್ ಸದಸ್ಯರು ಮಾತ್ರ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡು ಭಾಷಣ ಆಲಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಧರಣಿಯಲ್ಲಿದ್ದರೂ ಕುತೂಹಲದಿಂದ ಭಾಷಣದ ಪ್ರತಿ ಮೇಲೆ ದೀರ್ಘಾವಧಿಯಲ್ಲಿ ಕಣ್ಣಾಡಿಸಿದರು.
ಸಿಟ್ಟಾದ ಸಭಾಧ್ಯಕ್ಷರು: ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್ ಕಾಗೇರಿ ತಾಳ್ಮೆ ಕಳೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸದನದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಸಂವಿಧಾನ ಶಿಲ್ಪಿಗೆ ಗೌರವ ತೋರಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡುತ್ತೇನೆಂದ ಸ್ಪೀಕರ್, ನಿಮ್ಮನ್ನು ಜನ ನೋಡುತ್ತಿರುತ್ತಾರೆ. ಅವರು ಸರಿಯಾದ ತೀರ್ಮಾನ ಮಾಡುತ್ತಾರೆ ಎಂದು ಎಚ್ಚರಿಸಿದರು.
ನಾವು ಚರ್ಚೆ ಮಾಡಲ್ಲ
ಸಂವಿಧಾನ ಕುರಿತ ಚರ್ಚೆಯಲ್ಲಿ ನಾವು ಪಾಲ್ಗೊಳ್ಳಲ್ಲ ಎಂದು ಕಾಂಗ್ರೆಸ್ ಸ್ಪಷ್ಟ ನಿರ್ಧಾರಕ್ಕೆ ಬಂದಿದೆ. ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಮ್ಮ ಬೇಡಿಕೆ, ಮೊದಲು ಈ ಬೇಡಿಕೆ ಈಡೇರಿಸಿ ಸಂವಿಧಾನ ಉಳಿಸಲಿ, ಬಳಿಕ ಚರ್ಚೆ ಮಾಡುವುದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಸ್ಪೀಕರ್ ಹೇಳಿದ್ದರಲ್ಲಿ ಏನೂ ಹೊಸತಿಲ್ಲ. ಇವೆಲ್ಲ ನಮಗೆ ಗೊತ್ತಿರುವ ವಿಚಾರ ಎಂದು ಹಿರಿಯ ಶಾಸಕರೊಬ್ಬರು ಪ್ರತಿಕ್ರಿಯೆ ನೀಡಿದರು.
ಸಭಾಧ್ಯಕ್ಷರ ಭಾಷಣದ ಪ್ರಮುಖ ಅಂಶಗಳು
1 ಭ್ರಷ್ಟಾಚಾರ, ಅಸಮಾನತೆ ವಾತಾವರಣವನ್ನು ನಿಮೂಲನೆ ಮಾಡುವ ಜವಾಬ್ದಾರಿ ಹಾಗೂ ರಾಜಕೀಯ ಇಚ್ಛಾಶಕ್ತಿ ಕುಸಿತಗೊಂಡಿದೆ ಎನ್ನುವ ಭಾವ ಸಾರ್ವಜನಿಕರಲ್ಲಿ ಬೇರೂರಿದೆ. ಹಾಗಾಗಿ ಜನರ ನಂಬಿಕೆ ಹಾಗೂ ಆಶೋತ್ತರಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಜನಪ್ರತಿನಿಧಿಗಳಾದ ನಾವು ಸಮಾಜದ ಅಭಿವೃದ್ಧಿಗಾಗಿ ದೃಢ ಸಂಕಲ್ಪದೊಂದಿಗೆ ಸಂವಿಧಾನ ರಚನಾಕಾರರ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಈಡೇರಿಸುವತ್ತ ಶ್ರಮಿಸಬೇಕಿದೆ.
2 ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಹೆಗ್ಗಳಿಕೆ ಇದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿರುವಂತೆ ನಡೆದುಕೊಳ್ಳುವ ರಾಜಕಾರಣ ನಮ್ಮದಾಗಬೇಕು. ಆಗ ಮಾತ್ರ ರಾಜಕಾರಣಕ್ಕೆ ಅರ್ಥಬರುತ್ತದೆ.
3 ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವುದೇ ಸಾಂವಿಧಾನಿಕ ನೈತಿಕತೆ. ಈ ನೈತಿಕತೆಯನ್ನು ಮತದಾರರಿಂದ ಹಿಡಿದು ರಾಷ್ಟ್ರಪತಿವರೆಗೂ ಪಾಲಿಸಬೇಕಿದೆ. ವೃತ್ತಿ ಬದುಕು, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ನೆಲೆಯಲ್ಲೂ ನೈತಿಕತೆ ಮೆರೆದರೆ ಸಂವಿಧಾನದ ಆಶಯ ಪೂರ್ಣಗೊಳ್ಳುತ್ತದೆ.
4 ಶಾಸನ ಸಭೆಗಳಲ್ಲಿ ನಾವು ವ್ಯಕ್ತಪಡಿಸುವ ನೈತಿಕತೆ ಎಂತಹುದು ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ. ನಮ್ಮ ನೈತಿಕತೆ ಸಾಂವಿಧಾನಿಕ ಹಾಗೂ ಮಾನಸಿಕ ನಡವಳಿಕೆಗೆ ಪೂರಕವಾಗಿರಬೇಕು.
5 ಭಾರತೀಯರಲ್ಲಿ ದೇಶಪ್ರೇಮ, ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಗಳನ್ನು ಉಂಟುಮಾಡಲು ಸಂವಿಧಾನದ ತಿಳಿವು ಅತ್ಯಗತ್ಯ. ಇಂತಹ ಸಂವಿಧಾನ ರಚನೆಗೆ ಮೂಲಾಧಾರವಾಗಿರುವ ಐತಿಹಾಸಿಕ ವಸ್ತು ವಿಷಯಗಳನ್ನು ತಿಳಿದುಕೊಳ್ಳುವುದು ಅತೀ ಮಹತ್ವದ ಸಂಗತಿ.