ಜಿಲ್ಲೆ

ಶಾಸಕರ ಅಮಾನತು ಅಸಾಂವಿಧಾನಿಕ ಕ್ರಮ...

ಯಶ್​ಪಾಲ್​ ಸುವರ್ಣ ಪ್ರತಿಕ್ರಿಯೆ

ಆದೇಶ ಹಿಂಪಡೆದ ಸ್ಪೀಕರ್​ ಖಾದರ್​

ವಿಜಯವಾಣಿ ಸುದ್ದಿಜಾಲ ಉಡುಪಿ

ಕಳೆದ ಅಧಿವೇಶನದ ಅವಧಿಯಲ್ಲಿ ಸ್ಪೀಕರ್​ ಯು.ಟಿ. ಖಾದರ್​ ಅವರು 18 ಶಾಸಕರನ್ನು ಅಮಾನತುಗೊಳಿಸಿದ ಆದೇಶವೇ ಅಸಾಂವಿಧಾನಿಕವಾಗಿದ್ದು, ಇದೀಗ ಸ್ಪೀಕರ್​ ಮೇ 25ರಂದು ತಮ್ಮ ಆದೇಶ ಹಿಂಪಡೆದಿದ್ದಾರೆ. ಶಾಸಕರಾಗಿ ನಮ್ಮ ಜವಾಬ್ದಾರಿ ನಿರ್ವಹಿಸಲು ಅವಕಾಶ ನೀಡಿದಂತಾಗಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವುದು ಹಾಗೂ ಕಾಂಗ್ರೆಸ್​ ಸಚಿವರು, ಶಾಸಕರು ಹನಿಟ್ರ್ಯಾಪ್​ಗೆ ಒಳಗಾದ ವಿಚಾರದ ಬಗ್ಗೆ ಅಂದು ಪ್ರತಿಭಟಿಸಿದ್ದೆವು. ಜನವಿರೋಧಿ ನಿಲುವು ತಾಳಿದಾಗ ವಿಪಕ್ಷದ ಶಾಸಕರಾಗಿ ಸದನದಲ್ಲಿ ಆಡಳಿತಾರೂಢ ಸರ್ಕಾರವನ್ನು ವಿರೋಧಿಸುವುದು ನಮ್ಮ ಕರ್ತವ್ಯ. ಆದರೆ, ಸ್ಪೀಕರ್​ ಏಕಪಕ್ಷೀಯವಾಗಿ 6 ತಿಂಗಳ ಕಾಲ 18 ಶಾಸಕರನ್ನು ಅಮಾನತು ಮಾಡಿ, ನಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ರ್ನಿಬಂಧಿಸಿದ್ದು ದುರಾದೃಷ್ಟಕರ.

ಈಗಾಗಲೇ ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಬಿಜೆಪಿ ವತಿಯಿಂದ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರೂ ಸಹ ಸ್ಪೀಕರ್​ಗೆ ಅಮಾನತು ಆದೇಶ ಹಿಂಪಡೆಯುವಂತೆ ಪತ್ರ ಬರೆದಿದ್ದರು. ಆದರೂ ಆದೇಶ ಹಿಂಪಡೆದಿರಲಿಲ್ಲ ಎಂದು ತಿಳಿಸಿದ್ದಾರೆ.

ಸಿದ್ಧಾಂತದೊಂದಿಗಿಲ್ಲ ರಾಜಿ

ವಿಪಕ್ಷ ಶಾಸಕನಾದ ನಾನು ಸರ್ಕಾರದ ಜನವಿರೋಧಿ ನೀತಿ ಹಾಗೂ ಮಸೂದೆಗಳನ್ನು ವಿರೋಧಿಸಿವುದು ನನ್ನ ಕರ್ತವ್ಯ. ಅಮಾನತು ಆದೇಶಗಳಿಂದ ನಮ್ಮ ಹೋರಾಟ ಹತ್ತಿಕ್ಕಲು ಎಂದಿಗೂ ಸಾಧ್ಯವಿಲ್ಲ. ನಮ್ಮ ಸಿದ್ಧಾಂತ ಹಾಗೂ ರಾಷ್ಟ್ರೀಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.