ಜಿಲ್ಲೆ

ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ

Gadag - Shivanand Hiremath

ಗದಗ: ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ  ಜಿಲ್ಲಾದ್ಯಂತ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ವ್ಯವಸ್ಥಿತವಾಗಿ ಜರುಗಿಸಬೇಕೆಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ  ಏರ್ಪಡಿಸಲಾಗಿದ್ದ   ಸ್ಪರ್ಶ ಕುಷ್ಠರೋಗ ಜಾಗೃತಿ  ಅಭಿಯಾನದ ಪಾಕ್ಷಿಕ ಆಚರಣೆಯ  ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದ  ಅಂಗವಾಗಿ ಈ ವರ್ಷ ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿ ಹಿಡಿಯಿರಿ ಎಂಬುದು ಘೋಷವಾಕ್ಯವಾಗಿದೆ. ಅದರಂತೆ ಅಧಿಕಾರಿಗಳೆಲ್ಲರೂ ಕಾರ್ಯನಿರ್ವಹಿಸೋಣ. ತಾಲೂಕು ಮಟ್ಟದಲ್ಲಿಯೂ ಸಹ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ಜರುಗಿಸಬೇಕು.  ಒಟ್ಟಾರೆಯಾಗಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ  ಅಭಿಯಾನವನ್ನು  ಯಶಸ್ವಿಗೊಳಿಸಬೇಕೆಂದರು.  

ಕುಷ್ಟರೋಗದ ಕುರಿತು ಜನಸಾಮಾನ್ಯರಲ್ಲಿ ಭಯ ಬೇಡ. ಕುಷ್ಟರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು ಸಂಪೂರ್ಣವಾಗಿದೆ. ವ್ಯಕ್ತಿ ದೇಹದ ಮೇಲೆ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಿ. ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಿ ಕುಷ್ಟರೋಗಿಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ನೀಡೋಣ. ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡು ಯಶಸ್ವಿಗೊಳಿಸೋಣ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಹೇಳಿದರು.  

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರು ಮಾತನಾಡಿ  ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ಹಮ್ಮಿಕೊಳ್ಳಲಾಗಿದ್ದು  ಸದರಿ ಅವಧಿಯಲ್ಲಿ ಎಲ್ಲ ಗ್ರಾಮದ ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುವುದು.  ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಳ್ಳಲಾಗುವುದು. ಕುಷ್ಟ ರೋಗ ಸಂಪೂರ್ಣ ಗುಣಮುಖ ಹೊಂದುವ ಕಾಯಿಲೆಯಾಗಿದ್ದು ಕುಷ್ಠರೋಗವನ್ನು ಶೀಘ್ರ ಪತ್ತೆ ಹಚ್ಚಿ ನಿಗದಿತ ಸಂಪೂರ್ಣ ಚಿಕಿತ್ಸೆಯನ್ನು ಪಡೆದು ನಿಯಮಿತ ವ್ಯಾಯಾಮ ಮಾಡಿದಲ್ಲಿ ಕುಷ್ಠರೋಗದಿಂದ ಸಂಪೂರ್ಣ ಗುಣಮುಖ ಹೊಂದಬಹುದಾಗಿದೆ . ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುವಿಧ ಔಷಧಿ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಸಭೆಯಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಠರೋಗ ವಿಭಾಗದ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.  

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಸಿ.ಕರಿಗೌಡ್ರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ,  ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ತಾಲೂಕು ಆರೋಗ್ಯಾಧಿಕಾರಿಗಳು,  ಸಮಿತಿ ಸದಸ್ಯರು  ಹಾಜರಿದ್ದರು.