ಜಿಲ್ಲೆ

ವಿದ್ಯಾರ್ಥಿಗಳಿಗಾಗಿ ಚಕ್ರದ ಮೇಲೆ ಅಂತರಿಕ್ಷ ವಿಶೇಷ ಬಸ್ ವ್ಯವಸ್ಥೆ

ರಾಜಣ್ಣ

ಮೇಲುಕೋಟೆ: ಬಾಹ್ಯಾಕಾಶದ ವಿಶೇಷತೆಗಳನ್ನು ಮಕ್ಕಳಿಗೆ ತಲುಪಿಸಲು ಸರ್ಕಾರಿ ಶಾಲಾ ಮಕ್ಕಳಿಗಾಗಿ ಇಸ್ರೋ ಚಕ್ರದ ಮೇಲೆ ಅಂತರಿಕ್ಷ (ಸ್ಪೇಸ್ ಆನ್ ವ್ಹೀಲ್ಸ್ ) ವಿಶೇಷ ಬಸ್ ರೂಪಿಸಿದೆ ಎಂದು ಇಸ್ರೋ ವಿಜ್ಞಾನಿ ಡಾ.ಶ್ರೀನಿವಾಸ್ ತಿಳಿಸಿದರು.


ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಸಹಯೋಗದಲ್ಲಿ ಮೇಲುಕೋಟೆಯಲ್ಲಿ ಮಕ್ಕಳಿಗೆ ಗುರುವಾರ ಏರ್ಪಡಿಸಿದ್ದ ಬಾಹ್ಯಾಕಾಶದ ವೈವಿಧ್ಯತೆಯ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮೇಲುಕೋಟೆಯ ಶಾಲಾ-ಕಾಲೇಜು ಮಕ್ಕಳಿಗೆ ಅಂತರಿಕ್ಷ ವಿಶೇಷತೆ, ಇಸ್ರೋ ಸಾಧನೆಯ ಮೈಲಿಗಲ್ಲು ಹಾಗೂ ಚಂದ್ರಯಾನದ ವಿಶೇಷತೆ ಪರಿಚಯಿಸುವ ಸಲುವಾಗಿ ಇಸ್ರೋ ಸ್ಪೇಸ್ ಆನ್ ವ್ಹೀಲ್ಸ್ ಬಸ್ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳು ಬಾಹ್ಯಾಕಾಶದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಬೇಕು, ವೈಜ್ಞಾನಿಕವಾಗಿ ವಿಶ್ಲೇಷಿಸುವ ಗುಣ ಹೊಂದಬೇಕು. ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ವಿ ಚಂದ್ರಯಾನ ಹಮ್ಮಿಕೊಳ್ಳುವ ಮೂಲಕ ಸಾಧನೆ ಮಾಡಿದೆ. ಕರ್ನಾಟಕದ ವಿವಿಧ ಕಡೆ ಸರ್ಕಾರಿ ಶಾಲಾ-ಕಾಲೇಜು ಮಕ್ಕಳಿಗಾಗಿ ಇಸ್ರೋ ಬಸ್ ವ್ಯವಸ್ಥೆ ಮಾಡುತ್ತಿದೆ. ಬೆಂಗಳೂರಿನ ಕಚೇರಿಯನ್ನು ಸಂಪರ್ಕಿಸಿ ಅನುಕೂಲ ಪಡೆಯಬಹುದು ಎಂದು ತಿಳಿಸಿದರು.


ಚಕ್ರದ ಮೇಲೆ ಅಂತರಿಕ್ಷ ಬಸ್ ಪ್ರದರ್ಶನ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಇಸ್ರೋ ಭಾರತದ ಹೆಮ್ಮೆಯಾಗಿದ್ದು, ಚಂದ್ರಯಾನದ ಯಶಸ್ಸಿಗೆ ವಿಜ್ಞಾನಿಗಳ ಸಾಧನೆ ಅವಿಸ್ಮರಣೀಯ. ಚಂದ್ರಯಾನದ ಭಾರತದ ಸಾಧನೆಗೆ ವಿಶ್ವದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೋ ವಿಜ್ಞಾನಿಗಳು ಮೇಲುಕೋಟೆಗೆ ಆಗಮಿಸಿ ಶಾಲಾ-ಕಾಲೇಜು ಮಕ್ಕಳಿಗೆ ಅಂತರಿಕ್ಷದ ಮಾಹಿತಿ ನೀಡಿದ್ದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.


ಮೇಲುಕೋಟೆಯ ಬಾಲಕರು, ಬಾಲಕಿಯರ ಶಾಲೆ, ಯದುಶೈಲ ಪ್ರೌಢಶಾಲೆ, ಎಸ್.ಇ.ಟಿ ಪಾಲಿಟೆಕ್ನಿಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯದುಗಿರಿ ಆಂಗ್ಲಮಾಧ್ಯಮ ಶಾಲೆ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ, ಬಳಿಘಟ್ಟ, ಕನಗೋನಹಳ್ಳಿ ಶಾಲೆ ಆಚಾರ್ಯಪಾಠ ಸೇರಿದಂತೆ ವಿವಿಧ ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಬಾಹ್ಯಾಕಾಶದ ವೈವಿಧ್ಯತೆ ಮತ್ತು ಚಂದ್ರಯಾನದ ಮಹತ್ವ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.


ಇಸ್ರೋ ಕಾರ್ಯಕ್ರಮವನ್ನು ಈಶಮುರಳಿ ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಯಶಸ್ವಿಯಾಗಿ ಸಂಘಟಿಸಿದ್ದರು.
ಚೆಲುವನಾರಾಯಣಸ್ವಾಮಿ ದೇವಾಲಯದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗಿತ್ತು.


ಇಸ್ರೋ ವಿಜ್ಞಾನಿಗಳಾದ ಡಾ.ಶ್ರೀನಾಥ್, ಡಾ.ವಿಶ್ವನಾಥ್, ಡಾ.ಮಾಲತಿ, ಡಾ.ಆಕಾಶ್, ಇನ್ಫೋಸಿಸ್ ಅಧಿಕಾರಿ ಡಾ.ಪ್ರೀತಿ ಮಹದೇವ್, ಎಸ್‌ಇಟಿ ಸಮೂಹ ಶಿಕ್ಷಣ ಸಂಸ್ಥೆಗಳ ರಿಜಿಸ್ಟ್ರಾರ್ ನಿಂಗೇಗೌಡ, ಯದುಶೈಲಾ ಪ್ರೌಢಶಾಲೆ ಮುಖ್ಯಶಿಕ್ಷಕ ವಸಂತಕುಮಾರ್, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಭಾಗವಹಿಸಿದ್ದರು.